ಮಡಿಕೇರಿ, ಸೆ. 19: ಕೊಡಗು ಜಿಲ್ಲೆಯ ಎಲ್ಲೆಡೆ ಕಳೆದ 24 ಗಂಟೆಗಳಲ್ಲಿ ನಿರಂತರ ಮಳೆಯೊಂದಿಗೆ ಚಳಿ-ಗಾಳಿ ಹಾಗೂ ದಟ್ಟ ಮೋಡದ ವಾತಾವರಣ ಗೋಚರಿಸತೊಡಗಿದೆ. ಮುಂದಿನ ಮೂರು ದಿನಗಳಲ್ಲಿ ನಿರಂತರ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಅಧಿಕಾರಿಗಳು ‘ಶಕ್ತಿ’ ಯೊಂದಿಗೆ ಮಾಹಿತಿ ನೀಡಿದ್ದಾರೆ.ಇದೇ ತಾ. 13 ರಿಂದ ಆರಂಭ ಗೊಂಡಿರುವ ಉತ್ತರೆ ಮಳೆಯು ತಾ. 25ರ ತನಕವಿದ್ದು, ಆರಂಭಿಕವಾಗಿ ಸುರಿಯುವ ಲಕ್ಷಣವಿದೆ. ಪ್ರಸ್ತುತ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕೂಡ ಮಳೆ ಬೀಳುವ ಲಕ್ಷಣವಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭಾಗಮಂಡಲಕ್ಕೆ 200 ಇಂಚು 2020ರ ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ಭಾಗಮಂಡಲ ಸುತ್ತಮುತ್ತ 200 ಇಂಚು ಒಟ್ಟು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 206.44 ಇಂಚು ದಾಖಲಾ ಗಿತ್ತು. ಕಳೆದ 24 ಗಂಟೆಗಳಲ್ಲಿ ಈ ವ್ಯಾಪ್ತಿಗೆ 1.77 ಇಂಚು ಮಳೆಯಾಗಿದೆ.

ಸರಾಸರಿ ಮಳೆ: ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 0.77 ಇಂಚು ಮಳೆಯೊಂದಿಗೆ, ವರ್ಷಾರಂಭದಿಂದ ಇಂದಿನ ತನಕ 84.08 ಇಂಚು ಸರಾಸರಿ ಮಳೆ ಬಿದ್ದಿದೆ. ಕಳೆದ ವರ್ಷ ಈ ಹೊತ್ತಿಗೆ 98.39 ಇಂಚು ಮಳೆಯಾಗಿದ್ದು, ಪ್ರಸಕ್ತ ಅವಧಿಗೆ ಸರಾಸರಿ 14.31 ಇಂಚು ಕಡಿಮೆ ಕಂಡುಬಂದಿದೆ. ಕಳೆದ ಆಗಸ್ಟ್ ಮೊದಲ ವಾರದಲ್ಲಿ ಆಶ್ಲೇಷಾ ಮಳೆ ಧಾರಾಕಾರ ಸುರಿಯುವುದರೊಂದಿಗೆ ತಲಕಾವೇರಿ ದುರಂತ ಸೃಷ್ಟಿಸಿತ್ತು. ಆಗಸ್ಟ್ 3ನೇ ವಾರದಿಂದ ಮಳೆ ಇಳಿಮುಖಗೊಂಡಿತ್ತು.

ಈಗ ಸೆಪ್ಟೆಂಬರ್ ನಡುವೆ ಮತ್ತೆ ಜಿಲ್ಲೆಯಾದ್ಯಂತ ಸುರಿಯುವ ಮೂಲಕ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ದಕ್ಷಿಣ ಕೊಡಗಿನ ಕೇರಳ ಗಡಿ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹಗಲಿರುಳು ಮಳೆ ಯಾಗುತ್ತಿದೆ. ಉತ್ತರ ಕೊಡಗಿನಲ್ಲಿ ಮಳೆ ಸಾಧಾರಣವಿದ್ದು, ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಶಾಂತಳ್ಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಇದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಉಂಟಾಗಿಲ್ಲ: ಜಿಲ್ಲಾ ಡಳಿತ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಿದ್ದರೂ, ಕೊಡಗಿನ ಮೂರು ತಾಲೂಕುಗಳಲ್ಲಿ ಮಳೆಯಾ ಗುತ್ತಿದ್ದು, ಯಾವುದೇ ಸಮಸ್ಯೆಗಳ ಕುರಿತು ವರದಿಯಾಗಿಲ್ಲ ಎಂಬದಾಗಿ ಆಯ ತಾಲೂಕಿನ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.

ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ಸರಾಸರಿ

(ಮೊದಲ ಪುಟದಿಂದ) 1.23 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.75 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 0.34 ಇಂಚು ಮಳೆಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಿರಂತರ ಮಳೆ ಬೀಳುವಂತಾಗಿದೆ.

ಹೋಬಳಿವಾರು ಮಳೆ: ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕು 118.67 ಇಂಚು, ಸೋಮವಾರಪೇಟೆ ತಾಲೂಕು 56.77 ಇಂಚು, ವೀರಾಜಪೇಟೆ ತಾಲೂಕು 76.81 ಇಂಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಡಿಕೇರಿ ಹೋಬಳಿಯಲ್ಲಿ 1.12 ಇಂಚು ಮಳೆ ಬಿದ್ದಿದೆ. ಇತರ ಹೋಬಳಿಗಳಲ್ಲಿ ನಾಪೋಕ್ಲು 1.03 ಇಂಚು, ಸಂಪಾಜೆ 0.97 ಇಂಚು, ಭಾಗಮಂಡಲ 1.77 ಇಂಚು, ವೀರಾಜಪೇಟೆ 1.01 ಇಂಚು, ಹುದಿಕೇರಿ 1.73 ಇಂಚು, ಶ್ರೀಮಂಗಲ 0.62 ಇಂಚು, ಪೊನ್ನಂಪೇಟೆ 0.59 ಇಂಚು ಮಳೆಯಾಗಿದೆ. ಅಲ್ಲದೆ ಬಾಳೆಲೆ 0.79 ಇಂಚು, ಅಮ್ಮತ್ತಿ 0.17 ಇಂಚು, ಸೋಮವಾರಪೇಟೆ 0.33 ಇಂಚು, ಶನಿವಾರಸಂತೆ 0.25 ಇಂಚು, ಶಾಂತಳ್ಳಿ 0.48 ಇಂಚು, ಕೊಡ್ಲಿಪೇಟೆ 0.34 ಇಂಚು, ಕುಶಾಲನಗರ 0.21 ಇಂಚು, ಸುಂಟಿಕೊಪ್ಪ 0.43 ಇಂಚು ಮಳೆ ಬಿದ್ದಿದೆ.

ಹಾರಂಗಿಯಿಂದ ನದಿಗೆ ನೀರು

ಜೆಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣವು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಇದೀಗ ನದಿಗೆ ಹರಿಸಲಾಗುತ್ತಿದೆ. ಕ್ರಸ್ ಗೇಟ್ ಮೂಲಕ ಒಟ್ಟು 800 ಕ್ಯೂಸೆಕ್ಸ್ ನೀರು, ವಿದ್ಯುತ್ ಘಟಕದ ಮೂಲಕ 2000 ಕ್ಯೂಸೆಕ್ಸ್ ಸೇರಿದಂತೆ ಒಟ್ಟು 2800 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ನಾಲೆಗೆ 700 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ.

ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆ

ಭಾಗಮಂಡಲ ವ್ಯಾಪ್ತಿಯಲ್ಲಿಯೂ ಮಳೆ ಹೆಚ್ಚಾಗಿ ಸುರಿಯುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನಾಪೋಕ್ಲು ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದ್ದು, ಮಳೆ ಹೆಚ್ಚಾದಲ್ಲಿ ಮಡಿಕೇರಿ ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆ ಇದೆ. ಮಳೆಯಿಂದಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಗದ್ದೆಗಳು ಜಲಾವೃತಗೊಂಡಿವೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ.

ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಅಲ್ಲದೇ ಕೃಷಿ ಚಟುವಟಿಕೆಗಳಿಗೆ ಮಳೆಯಿಂದಾಗಿ ಅನುಕೂಲವಾಗಿದೆ. ಆದರೆ ವಿಪರೀತ ಮಳೆಯಿಂದಾಗಿ ಶುಂಠಿ ಕೃಷಿ ಬೆಳೆದ ಕೃಷಿಕರಿಗೆ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ಭತ್ತ ನಾಟಿ ಕಾರ್ಯ ಪೂರ್ಣ

ಕಳೆದ ಕೆಲ ದಿನಗಳಿಂದ ಸಾಧಾರಣವಾಗಿ ಆಗುತ್ತಿದ್ದ ಮಳೆ, ಮತ್ತೆ ಚುರುಕುಗೊಂಡಿದೆ. ಜಿಲ್ಲೆಯಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಬಿಡುವು ನೀಡದೇ ಜೋರು ಮಳೆಯಾಗುತ್ತಿದೆ. ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಇದರೊಂದಿಗೆ ಕೃಷಿ ಚಟುವಟಿಕೆಗಳು ಸಹ ವೇಗ ಪಡೆದುಕೊಂಡಿದೆ.

ಕೊಡಗಿನಲ್ಲಿ ಪ್ರಸಕ್ತ ಸಾಲಿನ ಭತ್ತ ನಾಟಿಯು 30,500 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 23,010 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದು, ಶೇ.75.44 ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್ ತಿಳಿಸಿದ್ದಾರೆ.

ತಾಲೂಕುವಾರು ಮಳೆಯಾಶ್ರಿತ ಭತ್ತದ ಬೆಳೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿಗೆ 6,500 ಹೆಕ್ಟೇರ್ ಗುರಿಯಿದ್ದು, 4,700 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಸೋಮವಾರಪೇಟೆ ತಾಲೂಕಿಗೆ 7,600 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 6,980 ಹೆಕ್ಟೇರ್ ನಾಟಿ ಕಾರ್ಯ ಪೂರ್ಣಗೊಂಡಿದೆ. ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಗುರಿಯಿದ್ದು, 9,100 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಹಾರಂಗಿ ನೀರಾವರಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿಗೆ 2 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಗುರಿಯಿದ್ದು, 1,870 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಯ ಪೂರ್ಣಗೊಂಡಿದೆ. ಜೊತೆಗೆ ಚಿಕ್ಲಿಹೊಳೆ ನೀರಾವರಿ ಪ್ರದೇಶಕ್ಕೆ 400 ಹೆಕ್ಟೇರ್ ಬಿತ್ತನೆ ಗುರಿಯಿದ್ದು, 360 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕಾರ್ಯ ಪೂರ್ಣಗೊಂಡಿದೆ.

ಮುಸುಕಿನ ಜೋಳ ಬೆಳೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಗುರಿ ಇದ್ದು, ಈಗಾಗಲೇ 3,050 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಶಬಾನಾ ಎಂ. ಶೇಖ್ ಮಾಹಿತಿ ನೀಡಿದ್ದಾರೆ.

ಇದಲ್ಲದೆ ಕೃಷಿ ಚಟುವಟಿಕೆಗೆ ಅವಶ್ಯವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರಸಗೊಬ್ಬರದಲ್ಲಿ ಯಾವುದೇ ರೀತಿ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿತ್ತು. ಶನಿವಾರ ಬೆಳಿಗ್ಗೆ ತುಂತುರು ಮಳೆ ಸುರಿಯಿತು. ನಂತರ ಸಂಜೆಯವರೆಗೂ ಮೋಡ ಕವಿದ ವಾತಾವರಣವಿತ್ತು.

ವಾರದಿಂದ ಬಿಡುವು ನೀಡುತ್ತಾ ಸುರಿಯುತ್ತಿದ್ದ ಮಳೆ ರೈತರ ಮೊಗದಲ್ಲಿ ನೆಮ್ಮದಿ ಮೂಡಿಸಿದೆ. ಬೆಳೆಗಳಿಗೆ ಕೊಳೆ ತಗುಲಿ ಶುಂಠಿ ದರ ಕುಸಿದಿದೆ. 60 ಕೆ.ಜಿ. ಶುಂಠಿ ಚೀಲಕ್ಕೆ ರೂ. 700-800 ದರ ದೊರೆಯುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಗಿಡದಲ್ಲಿ ಕಾಫಿ ಕಾಯಿ ಹಾಗೂ ಕಾಳು ಮೆಣಸು ಉದುರಲಾರಂಭಿಸಿದೆ

ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ತಾ. 19ರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣದಿಂದ ಮಳೆ ಸುರಿಯುತ್ತಿರುವ ಕಾರಣ ಜನ ಆತಂಕಕ್ಕೆ ಒಳಗಾಗಿದ್ದಾರೆ. ಧಾರಾಕಾರ ಮಳೆಯ ಕಾರಣದಿಂದ ನದಿ, ಹೊಳೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಮಳೆಯಿದ್ದರೂ, ರಭಸದ ಗಾಳಿ ಇಲ್ಲದ ಕಾರಣ ಜನ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೂ, ಅಲ್ಲಲ್ಲಿ ಮರದ ರೆಂಬೆ, ಕೊಂಬೆ ಮುರಿದು ಬಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯವಾಗಿರುವದು ವರದಿಯಾಗಿದೆ.