ವೀರಾಜಪೇಟೆ, ಸೆ. 18: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಸದಸ್ಯರಿಗೆ ಆಹಾರ ಕಿಟ್ ವಿತರಣೆ ಹಾಗೂ ವಾರ್ಷಿಕ ಮಹಾಸಭೆ ತಾ. 27 ರಂದು ಪುರಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ ಎಂದು ಅಧ್ಯಕ್ಷ ದಿನೇಶ್ ನಾಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 175 ನೋಂದಾಯಿತ ಸದಸ್ಯರಿದ್ದಾರೆ. ಕೊರೊನಾ ಬಂದ ಕಾರಣ ಕಳೆದ ಮಾರ್ಚ್ ತಿಂಗಳಿಂದ ಬಸ್ ಕಾರ್ಮಿಕರಿಗೆ ಕೆಲಸ ಇಲ್ಲದೆ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಸಂಘದಿಂದ ಬಸ್ ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಸದಸ್ಯರ ಹಿತದೃಷ್ಠಿಯಿಂದ ಹಾಗೂ ದಾನಿಗಳ ನೆರವಿನಿಂದ ಆಹಾರ ಕಿಟ್‍ಗಳನ್ನು ವಿತರಿಸಲು ಸಂಘ ಕ್ರಮ ಕೈಗೊಂಡಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ. ಮಂಜುನಾಥ್ ಮಾತನಾಡಿ, ಅಂದು ನಡೆಯುವ ಸಭೆಗೆ ಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಎ.ಕೆ.ಎಸ್. ಟ್ರಸ್ಟ್‍ನ ಅಜ್ಜಿಕುಟ್ಟಿರ ಎಸ್. ನರೇಶ್, ಸಂಘದ ಕಾನೂನು ಸಲಹೆಗಾರ ಟಿ.ಪಿ ಕೃಷ್ಣ ಭಾಗವಹಿಸಲಿದ್ದಾರೆ. ಅದೇ ದಿನ ಅಪರಾಹ್ನ 12.30 ಗಂಟೆಗೆ ಸಂಘದ ಮಹಾಸಭೆ ಹಾಗೂ ಆಡಳಿತ ಮಂಡಳಿಯ ಸ್ಥಾನಗಳಿಗೆ ಕಾನೂನು ಬದ್ಧವಾಗಿ ಚುನಾವಣೆ ನಡೆಯಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಜಿ. ನಾಗೇಶ್, ಖಜಾಂಚಿ ಝೂಡಿವಾಜ್, ನಿರ್ದೇಶಕ ಲೋಕೇಶ್ ರೈ ಉಪಸ್ಥಿತರಿದ್ದರು.