ಸಿದ್ದಾಪುರ, ಸೆ. 18: ಅಮ್ಮತ್ತಿ ಹೋಬಳಿ ನಾಡ ಕಚೇರಿಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದಲ್ಲಿ ಒತುವರಿಯಾಗಿದ್ದ ಪೈಸಾರಿ ಕೆರೆಯನ್ನು ಕಂದಾಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ನಂದೀಶ್ ಕುಮಾರ್ ಆದೇಶದ ಮೇರೆಗೆ ಬಾಡಗ ಬಾಣಂಗಾಲ ಗ್ರಾಮದ ಸರ್ವೆ ನಂ. 46ರಲ್ಲಿ 1.71 ಎಕರೆ ಪೈಸಾರಿ ಕೆರೆಯನ್ನು ಒತ್ತುವರಿದಾರರಿಂದ ತೆರವುಗೊಳಿಸಲಾಯಿತು. ತೆರವುಗೊಳಿಸಿದ ಕೆರೆಯನ್ನು ಸರ್ವೆ ಇಲಾಖೆಯ ಮೂಲಕ ಸರ್ವೆ ನಡೆಸಿ ಬಳಿಕ ಕಂದಾಯ ಇಲಾಖಾ ಅಧಿಕಾರಿಗಳು ಮಾಲ್ದಾರೆ ಗ್ರಾ.ಪಂ. ಸ್ವಾಧೀನಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಗ್ರಾಮಲೆಕ್ಕಿಗ ಗೌಡಜ, ಸಹಾಯಕರಾದ ಶರಣು, ಮಂಜು, ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.