ಸಿದ್ದಾಪುರ, ಸೆ. 17: ಆದಿವಾಸಿಗಳಿಗೆ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಐ.ಟಿ.ಡಿ.ಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿದರು. ನಂತರ ಆದಿವಾಸಿ ಹೋರಾಟಗಾರ್ತಿ ಜೆ.ಕೆ ಮುತ್ತಮ್ಮ ಅವರೊಂದಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳಕ್ಕೆ ಭೇಟಿ ನೀಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ಅಧಿಕಾರಿಗಳು ಹಾಗೂ ಆಹಾರಗಳನ್ನು ಸರಬರಾಜು ಮಾಡುವ ಟೆಂಡರ್ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರಗಳನ್ನು ವಿತರಿಸುವುದಾಗಿ ಭರವಸೆ ನೀಡಿದರು. ದಿಡ್ಡಳ್ಳಿ ಹಾಡಿಗೆ ಭೇಟಿ ವೇಳೆ ಐ.ಟಿ.ಡಿ.ಪಿ ಇಲಾಖೆಯ ವೀರಾಜಪೇಟೆ ತಾಲೂಕು ಅಧಿಕಾರಿ ನವೀನ್, ಟೆಂಡರ್ದಾರ ಮೋಹನ್, ರವಿ, ಸಿ.ಬಿ ಹಳ್ಳಿ ಶಾಲಾ ಶಿಕ್ಷಕ ಗಣೇಶ್ ಭೇಟಿ ವೇಳೆ ಹಾಜರಿದ್ದರು.