ಮುಳ್ಳೂರು:, ಸೆ. 17: ಶನಿವಾರಸಂತೆ ಹೋಬಳಿ ಕಂದಾಯ ವ್ಯಾಪ್ತಿಯ ನಿವೇಶನ ರಹಿತ ಫಲಾನುಭವಿಗಳಿಗೆ ಭೂಮಿ ಹಕ್ಕುಪತ್ರವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಣೆ ಮಾಡಿದರು. ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಭೂಮಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಸರಕಾರ ವಸತಿ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳುವ ಸಲುವಾಗಿ ವಿವಿಧ ವಸತಿ ಯೋಜನೆಯಿಂದ ಮನೆ ಹಕ್ಕುಪತ್ರ ನೀಡುತ್ತಿದೆ. ಫಲಾನುಭವಿಗಳು ಹಕ್ಕುಪತ್ರವನ್ನು ಬೇರೆಯವರಿಗೆ ಮಾರಾಟ ಮಾಡುವುದು ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣ ಕಂಡುಬಂದರೆ ಸರಕಾರ ಫಲಾನುಭವಿಗಳ ಹಕ್ಕುಪತ್ರವನ್ನು ರದ್ದುಗೊಳಿಸುತ್ತದೆ ಎಂದು ಎಚ್ಚರಿಸಿದರು.

ಸರಕಾರ ವಿವಿಧ ಯೋಜನೆಯ ವಸತಿ ರಹಿತ ಫಲಾನುಭವಿಗಳಿಗೆ ಮನೆಕಟ್ಟಿಕೊಳ್ಳಲು ನೀಡಿರುವ ಹಕ್ಕುಪತ್ರದ ಜಾಗದಲ್ಲಿ ವಿವಿಧ ಯೋಜನೆಯಿಂದ ಮಂಜೂರಾದ ಹಣದಲ್ಲಿ ಮನೆಯನ್ನು ಕಟ್ಟಿಕೊಳ್ಳಬಹುದು, ಮನೆ ನಿರ್ಮಾಣ ಸಂದರ್ಭದಲ್ಲಿ ಹೆಚ್ಚುವರಿ ಹಣದ ಅಗತ್ಯ ಇದ್ದಾಗ ಫಲಾನುಭವಿ ಹಕ್ಕುಪತ್ರವನ್ನು ಬ್ಯಾಂಕಿನಲ್ಲಿ ಒತ್ತೆ ಇಟ್ಟು ಸಾಲ ಪಡೆದುಕೊಳ್ಳಬಹುದು. ಆದರೆ ಹಕ್ಕುಪತ್ರವನ್ನು ಬೇರೆಯವರಿಗೆ ಮಾರಾಟ ಮಾಡಿ ಹಣಪಡೆದುಕೊಳ್ಳುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ, ಶನಿವಾರಸಂತೆ ಕಂದಾಯ ಇಲಾಖೆಯ ಆರ್‍ಐ ನಂದಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು. -ಭಾಸ್ಕರ್ ಮುಳ್ಳೂರು