24 ಗಂಟೆಯಲ್ಲಿ 1,132 ಸೋಂಕಿತರ ಸಾವು

ನವದೆಹಲಿ, ಸೆ. 17: ಕಳೆದ 24 ಗಂಟೆಯಲ್ಲಿ ಬರೋಬ್ಬರಿ 97,894 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,132 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 51,18,254ಕ್ಕೆ ಏರಿಕೆಯಾಗಿದ್ದು, 10,09,976 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 83,198ಕ್ಕೆ ಏರಿಕೆಯಾಗಿದ್ದು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ 2,97,506 ಸಕ್ರಿಯ ಪ್ರಕರಣಗಳಿವೆ. ಶೇ. 37 ಕೊರೊನಾ ಮರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇನ್ನುಳಿದಂತೆ ಕರ್ನಾಟಕ- 1,01,645, ಉತ್ತರ ಪ್ರದೇಶ-96,702, ಆಂಧ್ರ ಪ್ರದೇಶ-90,279 ಮತ್ತು ದೆಹಲಿಯಲ್ಲಿ 30,914 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ದೇಶದ ಶೇ. 49 ಪ್ರಕರಣಗಳು ದಾಖಲಾಗಿವೆ. ಈ ಮೂರು ರಾಜ್ಯಗಳಲ್ಲಿ ಶೇ. 52 ರಷ್ಟು ಮರಣಗಳು ದಾಖಲಾಗಿವೆ.

ದೋಷಮುಕ್ತಗೊಳಿಸಲು ಅನ್ಸಾರಿ ಮನವಿ

ಅಯೋಧ್ಯೆ, ಸೆ. 17: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಜಮೀನು ವಿವಾದದಲ್ಲಿ ಮುಸ್ಲಿಂ ಕಡೆಯಿಂದ ಪ್ರಮುಖ ಕಕ್ಷಿದಾರರಾದ ಇಸ್ಬಾಲ್ ಅನ್ಸಾರಿ ಗುರುವಾರ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಮನವಿ ಮಾಡುವುದರ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯ ತಾ. 30 ರಂದು ತನ್ನ ತೀರ್ಪು ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಮಾಜಿ ಕೇಂದ್ರ ಸಚಿವ ಡಾ. ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಇಡೀ ಜಮೀನು ನೀಡಿದೆ. ಅನೇಕ ಆರೋಪಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ. ಹೆಚ್ಚಿನ ಆರೋಪಿಗಳು ವೃದ್ಧಾಪ್ಯದಲ್ಲಿರುವುದರಿಂದ ಅವರಿಗೆ ಈ ಸಮಯದಲ್ಲಿ ಶಿಕ್ಷೆ ವಿಧಿಸುವುದು ಸೂಕ್ತವಲ್ಲ ಸರಿಯಲ್ಲ ಎಂದು ಇಕ್ಬಾಲ್‍ಅನ್ಸಾರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತ-ಚೀನಾ ಗಡಿ ಬಿಕ್ಕಟ್ಟು ತೀವ್ರ

ನವದೆಹಲಿ, ಸೆ. 17: ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು, ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ. ಮಲಕ್ಕಾ ಜಲಸಂಧಿಯಲ್ಲಿ ಚೀನಾದ ಸಂಶೋಧನಾ ಹಡಗೊಂದು ಹಿಂದೂ ಮಹಾಸಾಗರದ ಭಾರತದ ಜಲಗಡಿಯೊಳಗೆ ಬಂದಿದ್ದು ಈ ಪ್ರದೇಶದಲ್ಲಿ ನೌಕಾಸೇನೆಯ ಯುದ್ಧ ಹಡಗನ್ನು ಕಂಡು ಚೀನಾದ ಹಡಗು ಹಿಂದಕ್ಕೆ ತೆರಳಿದೆ. ಕಳೆದ ಆಗಸ್ಟ್‍ನಲ್ಲಿ ಚೀನಾದ ಯುವಾನ್ ವಾಂಗ್ ಹಡಗು ಭಾರತದ ಜಲಗಡಿಯೊಳಗೆ ಪ್ರವೇಶಿಸಿತ್ತು ಎಂದು ನೌಕಾಪಡೆ ಇದೀಗ ದೃಢಪಡಿಸಿದೆ.

ರಾಷ್ಟ್ರಪತಿಗಳನ್ನು ಭೇಟಿಯಾದ ಪ್ರತಿಪಕ್ಷ

ನವದೆಹಲಿ, ಸೆ. 17: ಪ್ರತಿಪಕ್ಷಗಳ ನಾಯಕರು ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ, ಕಳೆದ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಜಂಟಿ ಮನವಿಯಲ್ಲಿ, ಗಲಭೆಗಳ ಕುರಿತು ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರತಿಪಕ್ಷಗಳ ಮುಖಂಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದ ಸಂದರ್ಭದಲ್ಲಿ ದೆಹಲಿ ಪೊಲೀಸರು ವಹಿಸಿದ ಪಾತ್ರದ ಬಗ್ಗೆ ತನಿಖೆಯಾಗಬೇಕು ಮತ್ತು ಸಿಎಎ / ಎನ್‍ಆರ್‍ಸಿ / ಎನ್‍ಪಿಆರ್ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದ ಕಾರ್ಯಕರ್ತರು ಹಾಗೂ ಯುವಕರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಅವರ ವಿರುದ್ಧ ಸುಳ್ಳು ಕೇಸ್‍ಗಳನ್ನು ದಾಖಲಿಸುತ್ತಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಹೊಸ ಆಯಾಮ

ಕಲಬುರಗಿ, ಸೆ. 17: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಲ್ಲಿ ಒಂದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಗುರುವಾರ ಕಲಬುರಗಿಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದೆ ಎಂದರು. ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘವು ನಿಗದಿತ ಗುರಿ ಮುಟ್ಟಿಸಲು ಯಶಸ್ವಿಯಾಗುತ್ತದೆ. ಅದಕ್ಕೆ ಸರ್ಕಾರದ ಸಂಪೂರ್ಣ ಸಹಕಾರವಿದೆ. ಕಲ್ಯಾಣ ಕರ್ನಾಟಕದ ಉತ್ಸವದ ಮಂಗಳ ಘಳಿಗೆಯಲ್ಲಿ ಈ ಭಾಗದ ಅಭಿವೃದ್ಧಿಯ ಹೊಸ ಶೆಕೆಗೆ ನಾಂದಿ ಹಾಡಲು ನನಗೆ ಸಂತೋಷವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಡ್ರಗ್ಸ್ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ

ಬೆಂಗಳೂರು, ಸೆ. 17: ಡ್ರಗ್ಸ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕುಮಾರಕೃಪಾದಲ್ಲಿಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದ ಅವರು, ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಸರ್ಕಾರ ಒತ್ತಡ ಹೇರುತ್ತಿದೆ. ಆದ್ದರಿಂದ ಇಡೀ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಬಂಧನ ಆಗಿಲ್ಲ. ಈ ಕುರಿತಾಗಿ ಪೊಲೀಸರಲ್ಲಿ ವಿಚಾರಿಸಿದ್ದೇನೆ. ಕೆಲವರನ್ನು ಆರೆಸ್ಟ್ ಮಾಡಿಲ್ಲ ಯಾಕೆ ಎಂದು ಕೇಳಿದೆ. ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೆಲ್ಲಾ ಗಮನಿಸಿದರೆ ಪೊಲೀಸರ ಮೇಲೆ ಸರ್ಕಾರದ ಒತ್ತಡವೂ ಇರಬಹುದು. ಇಲ್ಲ ಎಂದು ಹೇಳುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಗೆ ಸೋಂಕು

ರಾಯಚೂರು, ಸೆ. 17: ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಗೆ ಕೋವಿಡ್-19 ಸೋಂಕು ತಗುಲಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರನ್ನು ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಸತ್‍ನ ಮುಂಗಾರು ಅಧಿವೇಶನ ತಾ. 14 ರಿಂದ ಆರಂಭವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಕಾರಣ ಅಶೋಕ್ ಗಸ್ತಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಗುತ್ತಿಲ್ಲ. ಅವರು ರಾಜ್ಯಸಭೆ ಸದಸ್ಯರಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.