ಮಡಿಕೇರಿ, ಸೆ. 17: ಯಾವುದೇ ಕಾಮಗಾರಿ ನಡೆಸುವ ಸಂದರ್ಭ ಇದನ್ನು ಸ್ಥಳೀಯ ನಿವಾಸಿಗಳ ಗಮನಕ್ಕೆ ತರುತ್ತಿದ್ದೇನೆ. ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಸಾರ್ವಜನಿಕರ ಜವಾಬ್ದಾರಿಯಾಗಿರುತ್ತದೆ ಎಂದು ನಾಪೋಕ್ಲು ಕ್ಷೇತ್ರದ ಜಿ.ಪಂ. ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡಿದ್ದ ನಾಪೋಕ್ಲು ವ್ಯಾಪ್ತಿಯ ಕಾಮಗಾರಿಗಳಲ್ಲಿ ದುರುಪಯೋಗ ಸುದ್ದಿಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಕಾಮಗಾರಿ ಕಳಪೆ ಜಿ.ಪಂ. ಸದಸ್ಯರು ಕಾರಣ ಅಲ್ಲ ಎಂದು ಹೇಳಿದರು.

ಕಾಮಗಾರಿಯ ಸಂಪೂರ್ಣ ಪರಿಶೀಲನೆ ಹಾಗೂ ಹೊಣೆಗಾರಿಕೆ ಆಯಾ ಅಭಿಯಂತರರಿಗೆ ಸಂಬಂಧಿಸಿದ ಜವಾಬ್ದಾರಿಯೂ ಆಗಿದೆ. ತಾವು ಶಾಸಕ ಕೆ.ಜಿ. ಬೋಪಯ್ಯ ಅವರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಿದ್ದರೂ ಜಿ.ಪಂ. ಸದಸ್ಯರ ಮೌನ ಸಂಶಯಕ್ಕೆ ಎಡೆಯಾಗಿದೆ ಎಂದು ಆರೋಪಿಸಿರುವುದು ಸರಿಯಲ್ಲ. ಇಲ್ಲಿ ಮಳೆಗಾಲಕ್ಕೆ ಮುಂಚೆ ಕಾಮಗಾರಿ ಆರಂಭಿಸಲಾಗಿತ್ತು. ಮಳೆಯ ಕಾರಣದಿಂದ ಇದನ್ನು ನಿಲ್ಲಿಸಲಾಗಿದ್ದು, ಕಳಪೆ ಎಂದು ಬಿಂಬಿಸಲಾಗಿದೆ. ಇದೀಗ ಈ ಕಾಮಗಾರಿಯನ್ನು ಅಭಿಯಂತರರ ಸೂಚನೆಯಂತೆ ಪ್ರಾರಂಭಿಸಲಾಗಿದೆ. ನಾಪೋಕ್ಲು ಕೊಡವ ಸಮಾಜದ ರುದ್ರ ಭೂಮಿಯಲ್ಲಿ ನಡೆದ ಕಾಮಗಾರಿ ತಮಗೆ ಸಂಬಂಧಿಸಿದ್ದಲ್ಲ ಎಂದು ಅವರು ಹೇಳಿದ್ದಾರೆ.

ಸರಕಾರಿ ಪ್ರೌಢಶಾಲೆಯಲ್ಲಿ ನಡೆಸಿದ ಕಾಮಗಾರಿಯನ್ನು ಅಭಿಯಂತರರ ಯೋಜನೆ ಮತ್ತು ಅಂದಾಜು ಪಟ್ಟಿಯಂತೆ ನಿರ್ವಹಿಸಲಾಗಿದ್ದು, ಇದಕ್ಕೆ ಸೂಕ್ತ ದಾಖಲೆ ಇರುವುದಾಗಿ ಹೇಳಿದ ಅವರು, ಅಜ್ಜಿಮುಟ್ಟು ರಸ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಂದಿದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಗುತ್ತಿಗೆದಾರನಿಗೆ ನೋಟೀಸ್ ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಚೋಕಿರ ಸಜಿತ್ ಚಿಣ್ಣಪ್ಪ, ಕೇಲೇಟಿರ ದೀಪು, ಬಿ.ಎಂ. ಪ್ರತೀಶ್ ಹಾಜರಿದ್ದರು.