ನಾಪೆÇೀಕ್ಲು, ಸೆ. 16: ಇಲ್ಲಿಗೆ ಸಮೀಪದ ಕೂರುಳಿ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಸಂಕಟ ತಂದಿದೆ. ಇಲ್ಲಿ ನಿತ್ಯ ಪ್ರಯಾಣಿಸುವ ವಾಹನ ಚಾಲಕರು ಸಮಸ್ಯೆ ಎದುರಿಸುತ್ತಿ ದ್ದಾರೆ. ಮಳೆ ಬಂದರೆ ರಸ್ತೆ ಯಾವುದು ಗುಂಡಿ ಯಾವುದು ಎಂದು ಪ್ರತ್ಯೇಕಿಸಲಾರದ ಪರಿಸ್ಥಿತಿ ಇದೆ.ಇಲ್ಲಿನ ಸುಭಾಷ್ ನಗರದ ಮನೆಗಳಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಯನ್ನು ಕೂಡಲೇ ದುರಸ್ತಿಗೊಳಿಸ ಬೇಕು ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಒಂದು ವಾರಗಳ ಕಾಲ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹಾನಿಯಾಗಿದೆ. ಇದೀಗ ಹರಿಯುವ ನೀರು ಇಳಿಮುಖಗೊಂಡಿದ್ದರೂ ರಸ್ತೆಯ ತುಂಬಾ ಕಲ್ಲುಗಳು ತುಂಬಿವೆ. ಈ ಕಲ್ಲುಗಳ ರಸ್ತೆಯಲ್ಲಿಯೇ ಪ್ರಯಾಣಿಕರು ತೆರಳಬೇಕು. ಕೂರುಳಿ ಗ್ರಾಮದಿಂದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ಸುಮಾರು 2.5 ಕಿ.ಮೀ. ದೂರದವರೆಗೆ ಸಂಚಾರಕ್ಕೆ ಇರುವ ರಸ್ತೆ ಪೂರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ಹೊಂಡಗಳದ್ದೇ ದರ್ಬಾರು. ಕೂರುಳಿ ಗ್ರಾಮದ ಸುಮಾರು 50 ಕುಟುಂಬಗಳಿಗೆ ರಸ್ತೆ ಸಮಸ್ಯೆಯಾಗಿದೆ. ಎಮ್ಮೆಮಾಡು ಸೂಫಿ ಶಹೀದ್ ದರ್ಗಾಕ್ಕೆ ತೆರಳುವ ಕೂರುಳಿ ರಸ್ತೆಯ ದುಸ್ಥಿತಿ ಒಂದೆಡೆಯಾದರೆ ಅತ್ತ ಮುಖ್ಯರಸ್ತೆಯಿಂದ ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯೂ ಪೂರ್ಣಗೊಳ್ಳದೆ ಸಮಸ್ಯೆ ಕಾಡುತ್ತಿದೆ. ಡಾಮರೀಕರಣವಾಗದೇ ಇರುವುದರಿಂದ ರಸ್ತೆಯ ಕಲ್ಲುಗಳು ಸಂಚಾರಕ್ಕೆ ತೊಡಕಾಗಿದೆ.