ಕುಶಾಲನಗರ, ಸೆ. 16: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಅರ್ಹ ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಹಕ್ಕುಪತ್ರ ವಿತರಣೆ ಮಾಡಿದರು.

ಕಂದಾಯ ಇಲಾಖೆ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಅಪ್ಪಚ್ಚುರಂಜನ್, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ 71 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ಸರಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ 2600 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಇದುವರೆಗೆ ವಿವಿಧ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಸರಕಾರದ ಸೌಲಭ್ಯ ಪಡೆದುಕೊಂಡ ಫಲಾನುಭವಿಗಳು ಯಾವುದೇ ಕಾರಣಕ್ಕೂ ಮನೆಗಳನ್ನು ಮಾರುವುದಾಗಲಿ, ಬಾಡಿಗೆಗೆ, ಕ್ರಯಕ್ಕೆ ಒದಗಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇದುವರೆಗೆ 13 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು ಊರುಡುವೆ, ಅರಣ್ಯ ಭೂಮಿಯಲ್ಲಿ ನೆಲೆಸಿದವರ ಅರ್ಜಿಗಳು ಹಲವು ತಾಂತ್ರಿಕ ಕಾರಣಗಳಿಂದ ತಿರಸ್ಕøತÀಗೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ತಾಲೂಕು ತಹಶೀಲ್ದಾರ್ ಗೋವಿಂದರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಮಂಜೂರಾತಿ ನಿಯಮಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಚಂಗಪ್ಪ, ಕಂದಾಯ ಇಲಾಖೆ ಅಧಿಕಾರಿಗಳಾದ ಮಧುಸೂದನ್, ಗೌತಮ್ ಮತ್ತಿತರರು ಇದ್ದರು.