*ಗೋಣಿಕೊಪ್ಪಲು, ಸೆ. 16: ದೇವರಪುರ ಸಮೀಪದ ಹೆಬ್ಬಾಲೆ- ಭದ್ರಗೊಳ ಗ್ರಾಮದಲ್ಲಿ ಸಣ್ಣುವಂಡ ಮುತ್ತಪ್ಪ ಎಂಬುವರಿಗೆ ಸೇರಿದ್ದ ಹಸುವೊಂದನ್ನು ಹುಲಿ ದಾಳಿ ನಡೆಸಿ ಹತ್ಯೆ ಮಾಡಿದೆ. ಸೋಮವಾರ ಸಂಜೆ ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರಗೆ ಎಳೆದೊಯ್ದ ಹುಲಿ ಹಸುವಿನ ಹಿಂಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಮನೆ ಸಮೀಪದ ಕೊಟ್ಟಿಗೆಯವರೆಗೆ ಹುಲಿ ಸಂಚಾರ ಕಂಡುಬಂದಿರುವುದರಿಂದ ಗ್ರಾಮದ ಜನತೆಯಲ್ಲೂ ಭಯ, ಆತಂಕ ಆವರಿಸಿದೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವನ್ಯಮೃಗಗಳ ದಾಳಿಗೆ ಜಾನುವಾರುಗಳು ಹತ್ಯೆಯಾಗುತ್ತಿರುವುದರಿಂದ, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಇಂಥ ದುರ್ಘಟನೆಗಳು ನಿಯಂತ್ರಣಕ್ಕೆ ಬಾರದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.