ನವದೆಹಲಿ, ಸೆ. 15: ಭಾರತದ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಚೀನಾದ ಎಲ್ಲಾ ಹುನ್ನಾರಗಳನ್ನು ಸೋಲಿಸಲು ನಮ್ಮ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿವೆ. ದೇಶದ ಸಾರ್ವಭೌಮತೆ ಮೇಲೆ ದಾಳಿ ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಲೋಕಸಭೆಯಲ್ಲಿ ಇಂದು ಘೋಷಿಸಿದರು.
ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಾಯಿಸುವ ಚೀನಾದ ಪ್ರಯತ್ನವನ್ನು ಒಪ್ಪಲಾಗದು ಎಂದು ದೃಢಪಡಿಸಿದರು.ಪೂರ್ವ ಲಡಾಕ್‍ನಲ್ಲಿನ ಗಡಿ ತಂಟೆ, ಭಾರತ-ಚೀನಾ ಸೇನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವರು ವಿವರ ಹೇಳಿಕೆ ನೀಡಿದರು.ಪೂರ್ವ ಲಡಾಕ್‍ನಲ್ಲಿ ಗಡಿಯ ಉದ್ದಕ್ಕೂ ನಡೆಯುತ್ತಿರುವ ಮಿಲಿಟರಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಇದು ಸರ್ಕಾರದ ಮೊದಲ ಅಧಿಕೃತ ಹೇಳಿಕೆಯಾಗಿದೆ. ಲಡಾಕ್‍ನಲ್ಲಿ ಚೀನಾ ಜೊತೆಗಿನ ಗಡಿ ನಿಲುವನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಬದ್ಧವಾಗಿದೆ. ಆದರೆ ನೆರೆಯ ರಾಷ್ಟ್ರದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನ ಸ್ವೀಕಾರಾರ್ಹವಲ್ಲ. ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‍ಎ)ಯಿಂದ ಈ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಪ್ರಯತ್ನದಿಂದ ಕಳೆದ ಜೂನ್‍ನಲ್ಲಿ ಉಂಟಾದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದರು.
ಈ ತಿಂಗಳ ಆರಂಭದಲ್ಲಿ ಮಾಸ್ಕೋದಲ್ಲಿ ತಮ್ಮ ಚೀನಾದ ಸಹವರ್ತಿಯೊಂದಿಗೆ ನಡೆದ ಸಭೆಯಲ್ಲಿ ಭಾರತದ ಸಾರ್ವಭೌಮತ್ವದ ಬಗ್ಗೆ ಸ್ಪಷ್ಟಪಡಿಸಿದ್ದನ್ನು ಹಂಚಿಕೊಂಡರು.
ಪೂರ್ವ ಲಡಾಕ್‍ನ ಪಕ್ಕದ ಗಡಿ ಪ್ರದೇಶಗಳಲ್ಲಿ ಏಪ್ರಿಲ್‍ನಿಂದ ಚೀನಾ ಅತ್ಯಧಿಕ ಸಂಖ್ಯೆಯಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಸಹ ತನ್ನ ಸೈನಿಕರನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.
ಮೇ ಆರಂಭದಲ್ಲಿ, ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೈನಿಕರ ಸಾಮಾನ್ಯ, ಸಾಂಪ್ರ ದಾಯಿಕ ಗಸ್ತು ತಿರುಗುವಿಕೆಯನ್ನು ತಡೆಯಲು ಚೀನಾ ಸೇನೆ ಯತ್ನಿಸಿತ್ತು. ಈ ವೇಳೆ ಉಭಯ ದೇಶದ ಸೈನಿಕರು ಮುಖಾಮುಖಿ ಯಾಗಿದ್ದರು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಧಿವೇಶನಕ್ಕಾಗಿ ಸಂಸತ್ ಭವನ ಪ್ರವೇಶಿಸುವಾಗ ಸುದ್ದಿಗಾರ ರೊಂದಿಗೆ ಮಾತನಾಡಿ, “ನಮ್ಮ ಕೆಚ್ಚೆದೆಯ ಯೋಧರು ಪರ್ವತಗಳಲ್ಲಿನ ಪ್ರತಿಕೂಲ ಹವಾಮಾನದ ಮಧ್ಯೆ ಗಡಿಗಳನ್ನು ಕಾಪಾಡುತ್ತಿದ್ದಾರೆ. ನಮ್ಮ ಸೈನಿಕರನ್ನು ಬೆಂಬಲಿಸುವಲ್ಲಿ ಎಲ್ಲಾ ಸಂಸದರು, ದೇಶ ಒಂದಾಗಿದೆ’’ ಎಂದು ಹೇಳಿದ್ದರು ಎಂದು ಸಚಿವರು ನೆನಪಿಸಿದರು.