ಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಲ್ಲಿ ವಿವಿಧ ಕಚೇರಿ ಕೆಲಸಗಳಿಗೆ ಕೇವಲ ಹಿರಿಯರು ಅಥವಾ ಸಾರ್ವಜನಿಕರೇ ಅಲ್ಲದೆ; ನಿವೃತ್ತ ಸರಕಾರಿ ಅಧಿಕಾರಿಗಳ ಸಹಿತ ಸಿಬ್ಬಂದಿ, ಮಾಜಿ ಯೋಧರು ಕೂಡ ಅಲೆಯುವಂತಾಗಿದೆ ಎಂದು ಇಂದು ಅನೇಕರು ದೂರವಾಣಿ ಮೂಲಕ ‘ಶಕ್ತಿ’ಯೊಂದಿಗೆ ನೋವನ್ನು ತೋಡಿಕೊಂಡಿದ್ದಾರೆ.

ಇಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ಸೇವಾ ಕೇಂದ್ರದ ಸೇವೆಯ ಕುರಿತಾದ ವರದಿ ಬಳಿಕ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ‘ನಮ್ಮ ಕುಟುಂಬದ ಆಸ್ತಿಗೆ ಸರಕಾರದ ನಿಯಮದಂತೆ ಕಂದಾಯ ನಿಗದಿಗೊಳಿಸಿಕೊಡಿ; ಪಟ್ಟೆದಾರರ ಹೆಸರು ಅಳಿಸಿಕೊಡಿ; ಮೃತರಾದವರ ಪೌತಿಖಾತೆ ತೆಗೆದು ಹಾಕಿ, ವಾರಸುದಾರರ ಹೆಸರು ನಮೂದಿಸಿ ಕೊಡಿ, ಖಾತೆ ಹೊಂದಿರುವ ಭೂಮಾಲೀಕರ ಆಸ್ತಿ ವಿಂಗಡಣೆಯ ಸರ್ವೆ ಸಂಖ್ಯೆ ಬೇರ್ಪಡಿಸಿಕೊಡಿ, ಆಸ್ತಿಯ ಭೂನಕ್ಷೆ ಸಿದ್ಧಪಡಿಸಿಕೊಡಿ... ಎಂಬಿತ್ಯಾದಿಗಾಗಿ ಕಚೇರಿ ಬಾಗಿಲು ತಟ್ಟಿ ಸುಸ್ತಾಗಿದ್ದೇವೆ...

ಯಾವುದೇ ಕಚೇರಿಯಲ್ಲಿ ಕಾಂಚಣ ಸದ್ದು ಮಾಡದೇ ಯಾವ ಕೆಲಸವೂ ಆಗುತ್ತಿಲ್ಲ ಎಂಬದಾಗಿ ಜಿಲ್ಲಾ ನಿವೃತ್ತ ಅಧಿಕಾರಿ ಹಾಗೂ ಮಾಜಿ ಸೈನಿಕರ ಸಹಿತ ಅನೇಕರು ಅನಿಸಿಕೆ ಹಂಚಿಕೊಂಡಿದ್ದಾರೆ.

ಅನಿವಾರ್ಯವಾಗಿ ತಮ್ಮ ಕೆಲಸಗಳಿಗೆ ಕೊಡಗು ಸೇವಾ ಕೇಂದ್ರಕ್ಕೆ ತೆರಳಿದ್ದು, ಆ ಮೂಲಕ ಅರ್ಜಿಗಳನ್ನು ಅಥವಾ ಕಡತಗಳನ್ನು ವಿಲೇವಾರಿಗೆ ಪ್ರಯತ್ನಿಸಿದ ಬಗ್ಗೆಯೂ; ಹೋಬಳಿ ಕೇಂದ್ರ ಕಚೇರಿಯ ಮಂದಿ ಈಗ ಕಸಿವಿಸಿಗೊಂಡು ‘ನೀವು ಅಲ್ಲಿಗೆ ಯಾಕೆ ಹೋಗುತ್ತೀರಾ’ ಎಂದು ಹರಿಹಾಯ್ದಿದ್ದಾರೆ ಎಂದು ನೊಂದ ನಿವೃತ್ತ ಅಧಿಕಾರಿಯೊಬ್ಬರು ಬಹಿರಂಗಗೊಳಿಸಿದರು.

ಈ ನಡುವೆ ಸೇವಾ ಕೇಂದ್ರಕ್ಕೆ ಬರುವವರು ಕೇವಲ ಕಚೇರಿ ಸಮಸ್ಯೆಗಳಿಗೆ ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ನ್ಯಾಯೋಚಿತ ಬೆಳೆ ನಷ್ಟ ಪರಿಹಾರ ಸಂಬಂಧವೂ ಸಂಪರ್ಕಿಸಬಹುದು ಎಂದು ಅಲ್ಲಿನ ಪ್ರಮುಖ ತಮ್ಮು ಪೂವಯ್ಯ ಸಲಹೆ ನೀಡಿದ್ದಾರೆ.

ಫಲಾನುಭವಿಗಳು ತಮ್ಮ ಅರ್ಜಿಯೊಂದಿಗೆ ಭೂಮಿಯ ಸರ್ವೆ ನಂಬರ್ ಹಾಗೂ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಸೇವಾ ಕೇಂದ್ರಕ್ಕೆ ಸಲ್ಲಿಸಿದರೆ, ಆರ್‍ಟಿಸಿ ಇತ್ಯಾದಿಯನ್ನು ಕೇಂದ್ರದ ಕಚೇರಿಯಲ್ಲೇ ಹೊಂದಿಸಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಸೇವಾ ಕೇಂದ್ರದಲ್ಲಿ 9900706722 ಅಥವಾ 7022886285 ಸಂಖ್ಯೆಗೆ ಸಂಪರ್ಕಿಸ ಬಹುದು ಎಂದು ಸಲಹೆ ನೀಡಿದ್ದಾರೆ.