ಮಡಿಕೇರಿ, ಸೆ. 14: ಕೊಡಗಿನ ಜನತೆಗೆ ಪಾರಂಪರಿಕವಾಗಿ ಲಭಿಸಿರುವ ಕೋವಿ ಹಕ್ಕು ಹಾಗೂ ಪರವಾನಗಿ ಸಹಿತ ಕೋವಿ ಹೊಂದಿಕೊಳ್ಳಲು ಪರವಾನಗಿ ಪಡೆದುಕೊಳ್ಳಲು ಅನುಮತಿ ಹಾಗೂ ಜಮೀನಿನಲ್ಲಿರುವ ಮರ - ಮರಗಳನ್ನು ತೆಗೆಯಲು ಅಡ್ಡಿ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ತಮ್ಮ ಅಧ್ಯಕ್ಷತೆಯಲ್ಲಿಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು, ಕೊಡಗಿನವರಿಗೆ ಬಂದೂಕು ಪರವಾನಗಿ ಹೊಂದಲು ಅರಣ್ಯ ಇಲಾಖೆ ನಿರಾಪೇಕ್ಷಣಾ ಪತ್ರ ಕೊಡುತ್ತಿಲ್ಲ, ವನ್ಯಜೀವಿ ಕಾಯ್ದೆ ಪ್ರಕಾರ ಅರಣ್ಯ ವ್ಯಾಪ್ತಿಯಿಂದ 10 ಕಿ.ಮೀ. ಒಳಗಡೆ ವಾಸಿಸುತ್ತಿರುವವರಿಗೆ ನೀಡಲಾಗುವದಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಇಲಾಖೆ ಯಿಂದ ಸಮಜಾಯಿಷಿಕೆ ಬಯಸಿ ದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಅರಣ್ಯ ಇಲಾಖೆ ನಿರಾಪೇಕ್ಷಣಾ ಪತ್ರ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಪರವಾನಗಿ ನೀಡಲು ಅಧಿಕಾರವಿದೆ. ಆದರೆ ಇದೀಗ ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು ಅರಣ್ಯದಿಂದ 10 ಕಿ.ಮೀ. ಒಳಗಡೆ ಇರುವವರಿಗೆ ಪರವಾನಗಿ ನೀಡಲಾಗುವದಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯನ್ನು ಇಲಾಖೆ ಹಿಂಪಡೆದರೆ ಮಾತ್ರ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದರಿಂದ ಗರಂ ಆದ ಶಾಸಕರು, 10 ಕಿ.ಮೀ. ವ್ಯಾಪ್ತಿಯನ್ನು ಹೇಗೆ ಅಳತೆ ಮಾಡುತ್ತಾರೆ? ಹಾಗೇ ಅಳತೆ ಮಾಡಿದರೆ, ಗಾಳಿಯ ಅಳತೆ ತಕೊಂಡ್ರೆ ಯಾರಿಗೂ ಲೈಸೆನ್ಸ್ ಸಿಗುವದಿಲ್ಲ. ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತು ಸುತ್ತೋಲೆ ಕಳುಹಿಸುತ್ತಾರೆ. ಅವರಿಗೇನು ಗೊತ್ತಿದೆ? ಕೋವಿ ಯೊಂದಿಗೆ ಇಲ್ಲಿನ ಜನರ ಜೀವನ ಪದ್ಧತಿ.... ವ್ಯಕ್ತಿಯ ಮೇಲೆ ಬೇಟೆ, ಇನ್ನಿತರ ಮೊಕದ್ದಮೆಗಳಿದ್ದಲ್ಲಿ ಕೊಡು ವುದು ಬೇಡ, ನಾವು ಕೊಡಗಿನವರು ಏನು ಪಾಪ ಮಾಡಿದ್ದೇವೆ? ಇದು ಅನ್ಯಾಯದ (ಮೊದಲ ಪುಟದಿಂದ) ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದನಗೂಡಿಸಿದ ಶಾಸಕ ರಂಜನ್ ಅವರು, ಪರವಾನಗಿ ನವೀಕರಣ ಕೂಡ ಮಾಡುತ್ತಿಲ್ಲ, ತಂದೆಯ ಪರವಾನಗಿಯನ್ನು ಮರಣ ನಂತರ ಮಗನಿಗೆ ವರ್ಗಾವಣೆ ಮಾಡಿಕೊಡಲು ಕೂಡ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಸಚಿವರು, ಎಷ್ಟು ಅರ್ಜಿಗಳಿವೆ ಎಂದು ಪರಿಶೀಲನೆ ಮಾಡಿ ಮಾಹಿತಿ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು. ಕೋವಿ ಲೈಸೆನ್ಸ್ ವಿಭಾಗದ ಜವಾಬ್ದಾರಿ ಹೊತ್ತಿರುವ ಹೆಚ್ಚುವರಿ ಜಿಲ್ಲಾಧಿಕಾರಿಗಳ ಬಗ್ಗೆಯೂ ಸಾಕಷ್ಟು ಆರೋಪಗಳಿವೆ. ಮಹಿಳೆ ಎಂದು ಸುಮ್ಮನಿದ್ದೇನೆ ಎಂದು ಶಾಸಕ ಬೋಪಯ್ಯ ಹೇಳಿದರು. ಬಂದೂಕು ಪರವಾನಗಿ ನೀಡುವ ವಿಭಾಗದ ಸಿಬ್ಬಂದಿಗಳ ಮೇಲೆ ಸಾಕಷ್ಟು ಆರೋಪಗಳಿವೆ; ಬದಲಾವಣೆ ಮಾಡಬೇಕೆಂದು ಶಾಸಕ ಅಪ್ಪಚ್ಚುರಂಜನ್ ಆರೋಪಿಸಿದರು. ಯಾರ್ಯಾರು ಎಷ್ಟೆಷ್ಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಿ, ಮೂರು ವರ್ಷಗಳಿಗೆ ಸೀಮಿತ ಮಾಡುತ್ತೇವೆ ಎಂದು ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮರ - ಮರಳಿಗೆ ಅಡ್ಡಿಬೇಡ

ಪಂಚಾಯಿತಿ ಮಟ್ಟದಲ್ಲಿ ಮರಳು ತೆಗೆಯುವ ಬಗ್ಗೆ ಸ್ಥಳ ಗುರುತು ಆಗಿದೆಯಾ? ಈ ನಿಟ್ಟಿನಲ್ಲಿ ಕೈಗೊಂಡಿರುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಶಾಸಕ ರಂಜನ್ ಅವರು ಮಾಹಿತಿ ಬಯಸಿದರು. ಪ್ರತಿಕ್ರಿಯಿಸಿದ ಭೂ ವಿಜ್ಞಾನಿ ರೇಷ್ಮಾ ಅವರು, ಈ ಬಗ್ಗೆ ಸಮಿತಿ ರಚನೆ ಆಗಿದೆ, ಇನ್ನಷ್ಟೇ ನಿಕ್ಷೇಪಗಳನ್ನು ಗುರುತಿಸಬೇಕೆಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಇದೇ ಉತ್ತರ ಬರುತ್ತಿದ್ದು, ಏನೂ ಕೆಲಸ ಮಾಡಿಲ್ಲ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಆರೋಪಿಸಿದರು. ಅಧಿಕಾರಿಯನ್ನು ಅಮಾನತುಗೊಳಿಸಿ ಎಂದು ಶಾಸಕ ಬೋಪಯ್ಯ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಅಮಾನತು ಮಾಡಬೇಕಾ ಇಲ್ಲ ಕೆಲಸ ಮಾಡ್ತೀಯಾ? ಇಲ್ಲಿ ಇರಲು ಇಷ್ಟ ಇಲ್ಲವಾ? ರೈತರನ್ನು ಏಕೆ ಸತಾಯಿಸುತ್ತೀರಿ? ನೀನು ರೈತರ ಮಗಳಾಗಿದ್ದರೆ ಏನ್ ಮಾಡ್ತಿದ್ದೆ? ಮಾನವೀಯತೆ ಇಲ್ಲವಾ’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ಡಿಸೆಂಬರ್ ಒಳಗಡೆ ಕ್ರಮಕೈಗೊಂಡರೆ ಮಾತ್ರ ಮರಳು ತೆಗೆಯಲು ಸಾಧ್ಯ. ನಂತರ ಆಗಲ್ಲ ಎಂದು ಹೇಳಿದರು. ಶಾಸಕ ರಂಜನ್ ಮಾತನಾಡಿ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿಗಳಿಂದ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆ ಹಾಗೂ ತೊರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರೆ ಗುರುತಿಸುವ ಕಾರ್ಯ ಸುಲಭವಾಗಲಿದೆ ಎಂದು ಸಲಹೆ ಮಾಡಿದರು.

ಜಮೀನುಗಳಲ್ಲಿರುವ ಮರ - ಮರಗಳನ್ನು ತೆರವುಗೊಳಿಸುವ ಬಗ್ಗೆ ತಾವು ಹಾಗೂ ಶಾಸಕರು ಸರಕಾರದ ಮುಖ್ಯ ಕಾರ್ಯದರ್ಶಿ ಯವರೊಂದಿಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಆದೇಶ ಬರಲಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಲಿದ್ದಾರೆ. ಮರ - ಮರಳು ತೆಗೆಯಲು ತೊಂದರೆ ಕೊಡಬೇಡಿ ಎಂದು ಸಚಿವರು ಹೇಳಿದರು.

ಕೂಟಿಯಾಲ - ಕಡಮಕಲ್ಲು ರಸ್ತೆ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ. 78 ಕೋಟಿ ಬಂದಿದೆ; ರಸ್ತೆ ನಿರ್ಮಾಣವಾಗುವ ಸ್ಥಳಗಳಲ್ಲಿ ರಸ್ತೆ ಬದಿ ತೋಟಗಳಲ್ಲಿ ಮರಗಳಿವೆ. ಈ ಮರಗಳನ್ನು ಕಡಿದು ಬೆಳೆಗಾರರ ಉಪಯೋಗಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕಿದೆ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿದರು. ಸ್ವಂತ ಜಾಗದಲ್ಲಿರುವ ಮರಗಳನ್ನು ಬೆಳೆಗಾರರೇ ಕಡಿದುಕೊಳ್ಳಲಿ, ರಸ್ತೆ ಬದಿ ಇರುವದನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಸಚಿವರು ಸೂಚನೆ ನೀಡಿದರು.

ಕೂಟಿಯಾಲ - ಕಡಮಕಲ್ಲು ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಇದನ್ನು ಪೂರ್ಣಗೊಳಿಸಿ ಕೊಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕೋರಿದರು. ದನಿಗೂಡಿಸಿದ ಶಾಸಕ ಬೋಪಯ್ಯ ಅವರು, ಈ ರಸ್ತೆಗಳು ಅರಣ್ಯದಲ್ಲಿ ಹಾದು ಹೋಗುತ್ತಿದ್ದು, ಆ ಜಾಗಕ್ಕೆ ಬದಲಾಗಿ 47 ಎಕರೆಯಷ್ಟು ಪರ್ಯಾಯ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಆದರೂ ಅರಣ್ಯ ಇಲಾಖೆ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಕಳುಹಿಸುತ್ತಿಲ್ಲ. ಪಟ್ಟಿ - ತೊಡಿಕಾನ ರಸ್ತೆಗೆ ಹಣ ಮಂಜೂರಾಗಿ ಎರಡು ವರ್ಷ ಕಳೆದಿದೆ, ಅರಣ್ಯ ಇಲಾಖೆ ಕೇಳಿರುವ ಕೆಲವೊಂದು ಸಂದೇಹಗಳಿಗೆ ಇನ್ನೂ ಕೂಡ ಲೋಕೋಪಯೋಗಿ ಇಲಾಖೆ ಮಾಹಿತಿ ಸಲ್ಲಿಸಿಲ್ಲ; ಇಂತಹ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಎಂದು ಶಾಸಕ ಬೋಪಯ್ಯ ಹೇಳಿದರು. ಏನ್ ಮಾಡ್ತೀರಾ, ಮನೆಗೆ ಹೋಗ್ತೀರಾ, ಕೆಲಸ ಮಾಡ್ತೀರಾ? ಇಷ್ಟು ವರ್ಷ ಆದರೂ ರಸ್ತೆ ಆಗಿಲ್ಲ, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೂ ಪರಿವರ್ತನೆ

ಶಾಸಕ ಕೆ.ಜಿ. ಬೋಪಯ್ಯ ಅವರು, ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಆದೇಶವಿದ್ದರೂ ಪರಿವರ್ತನೆ ಆಗುತ್ತಿಲ್ಲ; ಇದರಿಂದ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಕಷ್ಟ ಆಗುತ್ತಿರುವ ಬಗ್ಗೆ ಗಮನ ಸೆಳೆದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮನೆಗಳ ನಿರ್ಮಾಣಕ್ಕೆ ಪರಿವರ್ತನೆಗೆ ಸಮಸ್ಯೆ ಇಲ್ಲ, ವಾಣಿಜ್ಯ ವ್ಯವಹಾರ ಸಂಬಂಧಿತ ಕೆಲವು ಗೊಂದಲಗಳಿವೆ. ವಾಣಿಜ್ಯ ಪರಿವರ್ತನೆಗೆ 26 ಅರ್ಜಿಗಳು ಬಂದಿದ್ದು, 12ಕ್ಕೆ ನಿರಪೇಕ್ಷಣಾ ಪತ್ರ ನೀಡಲಾಗಿದೆ. 2 ಅರ್ಜಿಗಳಲ್ಲಿ ಪೂರ್ಣ ಮಾಹಿತಿ ಇಲ್ಲ. ಕುಶಾಲನಗರದ 4 ಕಡೆಗಳಲ್ಲಿ ಕಾವೇರಿ ನದಿಪಾತ್ರದಲ್ಲಿ ಪರಿಶೀಲನೆ ಆಗುತ್ತಿದೆ ಎಂದು ಮಾಹಿತಿ ನೀಡಿದರು. ಮನೆ ಜಾಗವನ್ನು ವಾಣಿಜ್ಯಕ್ಕೆ ಪರಿವರ್ತನೆಗೆ 8 ಅರ್ಜಿಗಳಿವೆ ಎರಡು ವಿಲೇವಾರಿ ಯಾಗಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸೈನಿಕರಿಗೆ ಭೂಮಿ

ದೇಶ ಸೇವೆ ಮಾಡಿದ ಮಾಜಿ ಸೈನಿಕರುಗಳಿಗೆ ಭೂಮಿ ನೀಡುವ ಸಂಬಂಧ 19.11.2016ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಇದುವರೆಗೂ ಭೂಮಿ ನೀಡಲಾಗಿಲ್ಲ ಎಂದು ಶಾಸಕ ಬೋಪಯ್ಯ ಗಮನ ಸೆಳೆದರು. ಸಿ ಅಂಡ್ ಡಿ ಭೂಮಿ ಅರಣ್ಯ ಇಲಾಖೆಯಿಂದ ವಾಪಸ್ ಪಡೆಯಲಾಗಿದ್ದು, ಅದರಲ್ಲಿ ನೀಡಬಹು ದಾಗಿದೆ ಎಂದು ಹೇಳಿದರು. ಶಾಸಕ ರಂಜನ್ ದನಿಗೂಡಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸಿ ಅಂಡ್ ಡಿ ಭೂಮಿಯನ್ನು ಸಾರ್ವಜನಿಕ ಬಳಕೆಗೆ ಬಳಸಿಕೊಳ್ಳ ಬಹುದಾಗಿದೆ. ಮತ್ತೊಬ್ಬರಿಗೆ ಮಂಜೂರು ಮಾಡಲು ಆಗುವದಿಲ್ಲ ಎಂದು ಉತ್ತರಿಸಿದರು. ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಆದಷ್ಟು ಶೀಘ್ರವೇ ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಬಡವರಿಗೆ 50 ಸಾವಿರ ಆದಾಯ!

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ತಲಕಾವೇರಿ ಯ ಗಜಗಿರಿ ಬೆಟ್ಟ ಕುಸಿಯುವ ಸಂದರ್ಭವೇ ಕೋಳಿಕಾಡು ಎಂಬಲ್ಲಿಯೂ ಭೂಕುಸಿತ ವುಂಟಾಗಿದೆ. ಅಲ್ಲಿನ ಮನೆಗಳು ಅಪಾಯದಲ್ಲಿವೆ. ಅವರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡ ಬೇಕಿದೆ ಎಂದು ಗಮನ ಸೆಳೆದರು. ಅಲ್ಲದೆ ಅಲ್ಲಿನ ಪೈಸಾರಿಯಲ್ಲಿ 60 ಕುಟುಂಬಗಳು ವಾಸವಾಗಿದ್ದು, ಯಾವದೇ ಹಕ್ಕು ಪತ್ರ ನೀಡಿರುವದಿಲ್ಲ. ನಷ್ಟ ಪರಿಹಾರ, ಇನ್ನಿತರ ಸವಲತ್ತುಗಳಿಗೆ ಅರ್ಜಿ ಹಾಕೋಣ ವೆಂದರೆ ಅವರುಗಳಿಗೆ ಕಂದಾಯಾ ಧಿಕಾರಿಗಳು ರೂ. 50 ಸಾವಿರ ವರಮಾನದ ಆದಾಯ ದೃಢೀಕರಣ ನೀಡುತ್ತಾರೆ. ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ಲವೇ ಎಂದು ಪ್ರಶ್ನಿಸಿದರು. ಕಂದಾಯ ಅಧಿಕಾರಿಗಳ ಇಂತಹ ಕಾರ್ಯಗಳನ್ನು ಶಾಸಕರುಗಳು ಕೂಡ ಆಕ್ಷೇಪಿಸಿದರು. ಮಾತನಾಡಿದ ಸಚಿವರು ಕೂಡಲೇ ಕೋಳಿಕಾಡುವಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರಿಯಾದ ವ್ಯವಸ್ಥೆ ಮಾಡುವಂತೆ ಉಪವಿಭಾಗಾಧಿಕಾರಿ ಗಳಿಗೆ ಸೂಚನೆ ನೀಡಿದರು. ಇನ್ನುಳಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.