ಮುಳ್ಳೂರು, ಸೆ. 13: ಇಕ್ಕೇರಿ ಮೂಲದ ವೀರರಾಜೇಂದ್ರ ಜಂಗಮ ವ್ಯಕ್ತಿ ಕೊಡಗಿನ ಹಾಲೇರಿಯಲ್ಲಿ ರಾಜ ಆಳ್ವಿಕೆ ಮಾಡುವ ಮೂಲಕ ರಾಜ ಪರಂಪರೆಗೆ ನಾಂದಿಯಾಯಿತು ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್ ಹೇಳಿದರು.

ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶನಿವಾರಸಂತೆ ಕಸಾಪ ಹೋಬಳಿ ಘಟಕದ ವತಿಯಿಂದ ಪ್ರೆಸ್‍ಕ್ಲಬ್‍ನಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಿ. ಶಾಂತಮಲ್ಲಪ್ಪ ಸ್ವಾಮಿಗಳ ದತ್ತಿ ನಿಧಿ ಕಾರ್ಯಕ್ರಮದಲ್ಲಿ ‘ಕೊಡಗು ಆಳ್ವಿಕೆಯಲ್ಲಿ ವೀರಶೈವ ಅರಸರು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ವಿಜಯನಗರ ಆಳ್ವಿಕೆ ಕಾಲದಲ್ಲಿ ಇಕ್ಕೇರಿಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ ಜಂಗಮ ವೇಶದಲ್ಲಿ ಕೊಡಗಿನ ಹಾಲೇರಿಯಲ್ಲಿ 1633ರಲ್ಲಿ ವೀರರಾಜೇಂದ್ರ ಹೆಸರಿನಲ್ಲಿ ಅರಸ ಆಳ್ವಿಕೆ ಮಾಡಲು ನಾಂದಿಯಾಯಿತು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕನ್ನಡವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೊಡಗು ಕಸಾಪ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೊರೊನಾ ಸಮಸ್ಯೆ ನಡುವೆ ಹತ್ತನೆ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ.ಬಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ತಾಲೂಕು ಕಸಾಪದ ಹೆಚ್.ಜಿ. ಜವರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್‍ಕುಮಾರ್, ಕಸಾಪ ತಾಲೂಕು ಕಾರ್ಯದರ್ಶಿ ಡಿ.ಪಿ. ಲೋಕೇಶ್, ಕೃಷ್ಣಯ್ಯ, ಮುಂತಾದವರಿದ್ದರು. -ಭಾಸ್ಕರ್