ಗೋಣಿಕೊಪ್ಪ ವರದಿ, ಸೆ. 12: ನೊಕ್ಯ ಶ್ರೀಕೃಷ್ಣ-ಬಲರಾಮ ದೇವಸ್ಥಾನದಲ್ಲಿ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಮೂರು ದಿನ ಹಲವು ಪೂಜಾ ಕಾರ್ಯಗಳು ನಡೆದವು. ಹಲವು ಪೂಜಾ ವಿಧಿವಿಧಾನ ನಡೆಸಲಾಯಿತು. ಆಚರಣೆಯಂತೆ ಶ್ರೀಕೃಷ್ಣನ ವಿಗ್ರಹವನ್ನು ಹೊರ ತೆಗೆದು ಶಂಖದ ಮೂಲಕ ಹಾಲು, ತುಪ್ಪದಿಂದ ಹರಕೆ ತೀರಿಸಲಾಯಿತು. ಹಸುವನ್ನು ಸ್ನಾನ ಮಾಡಿಸಿ, ಗೋಪೂಜೆ ಮಾಡಲಾಯಿತು. ಬೇವು, ಬೆಲ್ಲ, ಇಡ್ಲಿ, ತುಪ್ಪ, ಶ್ರೀಕೃಷ್ಣನಿಗೆ ವಿಶೇಷ ಆಹಾರವಾಗಿ ಅರ್ಪಿಸುವ ಚಕ್ಕುಲಿ, ಕಡುಬು, ಅಂಬಟೆ ಸಾರು ಪ್ರಸಾದವಾಗಿ ಹಸುವಿಗೆ ನೀಡಲಾಯಿತು. ಭಕ್ತರು ಕೂಡ ಇದೇ ಆಹಾರವನ್ನು ಪ್ರಸಾದವಾಗಿ ಸೇವಿಸಿದರು.
ತಾ. 11ರ ರೋಹಿಣಿ ನಕ್ಷತ್ರದಲ್ಲಿನ ತೋಳಪ್ಪರ್ ಶ್ರೀಕೃಷ್ಣ ಜಯಂತಿಯಂದು ಆಚರಣೆ ಮಾಡಲಾಯಿತು. ತಾ. 9ರ ಕೃತಿಕಾ ನಕ್ಷತ್ರದಲ್ಲಿ ಬರುವ ಮನ್ನಾರ್ ಶ್ರೀಕೃಷ್ಣ ಜಯಂತಿ ಮೂಲಕ ಪೂಜೆಗೆ ಚಾಲನೆ ನೀಡಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ದೇವಸ್ಥಾನ ಉಸ್ತುವಾರಿ ಚೆಪ್ಪುಡೀರ ಕಾರ್ಯಪ್ಪ, ಕೊಡಗಿನಲ್ಲಿ ಕಕ್ಕಡ ಮಾಸದಲ್ಲಿ ಪೂಜೆಗಳು ನಡೆಯುವುದಿಲ್ಲ. ಇಸ್ಕಾನ್ ದೇವಸ್ಥಾನದ ಆಚರಣೆಯಂತೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪೂಜೆ ನಡೆಯುವುದಿಲ್ಲ. ಉಡುಪಿ ಶ್ರೀಕೃಷ್ಣ ದೇವಸ್ಥಾನ ನಿಯಮದಂತೆ ತೋಳಪ್ಪರ್ ಶ್ರೀಕೃಷ್ಣ ಜಯಂತಿಯಂದು ಆಚರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.