ದಸರಾ ಅರಮನೆ ಆವರಣಕ್ಕೆ ಸೀಮಿತ
ಮೈಸೂರು, ಸೆ. 12: ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಉಪಸ್ಥಿತಿಯಲ್ಲಿ ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಕೋವಿಡ್ ಹಿನ್ನೆಲೆ ಈ ಬಾರಿಯ ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬರುವ ಅ. 2 ರಂದು ಮಧ್ಯಾಹ್ನ 12.18 ಗಂಟೆಗೆ ದಸರಾ ಗಜಪಡೆ ಸ್ವಾಗತ ಕಾರ್ಯಕ್ರಮ ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ಹಿಂದೆ ವೀರನ ಹೊಸಹಳ್ಳಿಯಲ್ಲಿ ಆಯೋಜಿಸುತ್ತಿದ್ದ ಗಜಪಯಣ ಸಮಾರಂಭ ಇರುವುದಿಲ್ಲ. ನೇರವಾಗಿ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯ ಆಗಮನವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು. ಈ ಬಾರಿ ಕೊರೊನಾ ವಾರಿಯರ್ಸ್ಗಳಿಂದ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಐವರು ಕೊರೊನಾ ವಾರಿಯರ್ಸ್ಗಳ ಪೈಕಿ ಒಬ್ಬರು ದಸರಾ ಉದ್ಘಾಟನೆ ಮಾಡಲಿದ್ದು, ಉಳಿದವರಿಗೆ ಸನ್ಮಾನ ಮಾಡಲಾಗುತ್ತದೆ. ಈ ಸನ್ಮಾನಿತರ ಪಟ್ಟಿಯಲ್ಲಿ ಕೋವಿಡ್ ಶವಸಂಸ್ಕಾರ ಮಾಡಿದ ವ್ಯಕ್ತಿಯನ್ನು ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪ ಬಂದಿದೆ ಎಂದು ಹೇಳಿದರು.
4,968 ವೈದ್ಯರುಗಳಿಂದ ಸಭೆ ಬಹಿಷ್ಕಾರ
ಬೆಂಗಳೂರು, ಸೆ. 12: ಕೋವಿಡ್ ಪ್ರಕರಣಗಳು ತಾರಕಕಕ್ಕೇರಿರುವ ಬೆನ್ನಲ್ಲೇ ಮತ್ತೊಮ್ಮೆ ಆರೋಗ್ಯ ಇಲಾಖೆ ಮತ್ತು ಸರ್ಕಾರದ ನಡುವೆ ಸಂಘರ್ಷ ಆರಂಭಗೊಂಡಿದೆ. ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂಬ ಕಾರಣ ನೀಡಿ, ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ತಾ. 15 ರಿಂದ ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸರ್ಕಾರಕ್ಕೆ ಒಂದು ವಾರದ ಗಡವು ನೀಡಿತ್ತು. ಆದರೆ, ಸರ್ಕಾರವು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂಘದ ಅಧ್ಯಕ್ಷ ಡಾ. ಜಿ.ಎ. ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿದ ವೈದ್ಯರು, ಆನ್ಲೈನ್ ಸಹಿತ ಎಲ್ಲ ಸರ್ಕಾರಿ ಸಭೆಗಳಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ.
ಸಾಲ ತೀರಿಸಲು ಷೇರುಗಳ ಮಾರಾಟ
ಮುಂಬೈ, ಸೆ. 12: ಸಾಲದ ಹೊಡೆತಕ್ಕೆ ಸಿಲುಕಿರುವ ಟಾಟಾ ಮೋಟಾರ್ಸ್ ರೂ.68 ಸಾವಿರ ಕೋಟಿ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಟಾಟಾ ಟೆಕ್ನಾಲಜೀಸ್ ಮತ್ತು ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮೆಷನರಿ ಕೊ. ಪ್ರೈ. ಲಿ.ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಾರ್ಚ್ನಲ್ಲಿ ಟಾಟಾ ಮೋಟಾರ್ಸ್ ಸಾಲ 48 ಸಾವಿರ ಕೋಟಿ ಇತ್ತು. ಆದರೆ ಕೊರೊನಾ ವೈರಸ್ ಬಿಕ್ಕಟ್ಟಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಹಣ ಖರ್ಚಾಗಿದ್ದು ಜುಲೈ ವೇಳೆಗೆ ಅದು 68 ಸಾವಿರ ಕೋಟಿ ರೂಪಾಯಿಗೆ ತಲುಪಿತ್ತು. ಹೀಗಾಗಿ ಷೇರು ಮಾರಾಟಕ್ಕೆ ಮುಂದಾಗಿದೆ. ಈ ಷೇರು ಮಾರಾಟದ ಮೂಲಕ ಸಂಗ್ರಹವಾಗುವ ಹಣದಿಂದ ಸಾಲ ತೀರಿಸುವುದು ಕಂಪನಿಯ ಯೋಜನೆಯಾಗಿದೆ. ಬ್ರಿಟನ್ನಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವೂ ಸೇರಿ ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯ ಜಾಗತಿಕ ವಾಹನ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 64 ರಷ್ಟು ಕುಸಿತವಾಗಿದ್ದು 91,594 ವಾಹನಗಳಿಗೆ ಇಳಿಕೆಯಾಗಿದೆ.
ರೋಗ ನಿರೋಧಕ ಶಕ್ತಿ ಪ್ರಬಲ
ನವದೆಹಲಿ, ಸೆ. 12: ಪ್ರಾಣಿಗಳ ಮೇಲಿನ ಕೋವಾಕ್ಸಿನ್ ಅಧ್ಯಯನದ ಮೂಲಕ ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ಕಂಡುಬಂದಿದೆ ಎಂದು ಭಾರತ್ ಬಯೋಟೆಕ್ ಔಷಧೀಯ ಕಂಪೆನಿ ಹೇಳಿದೆ. ಕೋವಾಕ್ಸಿನ್ ಕೋವಿಡ್-19 ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ್ದು, ದೇಶಾದ್ಯಂತ ಸುಮಾರು 12 ಸಂಸ್ಥೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಸ್ವದೇಶಿ ನಿರ್ಮಿತ ಈ ಲಸಿಕೆ ದೇಶದಲ್ಲಿನ ಕೊರೊನಾ ವೈರಸ್ ಲಸಿಕೆಗಳ ಪೈಕಿಯಲ್ಲಿ ಮುಂಚೂಣಿಯಲ್ಲಿದೆ. ಕೋವಾಕ್ಸಿನ್ ಮೇಲಿನ ಪ್ರಾಣಿ ಪ್ರಯೋಗ ಅಧ್ಯಯನದಲ್ಲಿ ಪರಿಣಾಮಕಾರಿ ದಕ್ಷತೆ ಕಂಡುಬಂದಿದೆ ಎಂದು ಹೈದ್ರಾಬಾದ್ ಮೂಲದ ಸಂಸ್ಥೆ ತಿಳಿಸಿದೆ. ಕೋವಾಕ್ಸಿನ್ ಔಷಧದಿಂದ ಪ್ರಬಲ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತಿದೆ. ಇದು ಸಾರ್ಸ್-ಕೋವ್-2 ವೈರಸ್ನಿಂದ ಹರಡುವ ಸೋಂಕು ಹಾಗೂ ಕಾಯಿಲೆಯನ್ನು ತಡೆಗಟ್ಟುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ಕಲಬುರಗಿ, ಸೆ. 12: ಕಲಬುರಗಿಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾರ್ಮ್ ಹೌಸ್ನಲ್ಲಿ ಪತ್ತೆಯಾದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಕಾಳಗಿ ಠಾಣೆ ಪಿಎಸ್ಐ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಆದೇಶಿಸಿದ್ದಾರೆ. ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ ಮತ್ತು ಬೀಟ್ ಪೊಲೀಸ್ ಕಾನ್ಸ್ಟೇಬಲ್ಗಳಾದ ಶರಣಪ್ಪ ಹಾಗೂ ಅನಿಲ್ ಭಂಡಾರಿ ಅಮಾನತುಗೊಂಡವರು. ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣನಾಯಕ್ ತಾಂಡಾದ ಕುರಿ ಫಾರ್ಮ್ ಹೌಸ್ನಲ್ಲಿ ರೂ. 6 ಕೋಟಿ ಮೌಲ್ಯದ ಗಾಂಜಾ ಪತ್ತೆಯಾಗಿದ್ದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಪುಸ್ತಕ ನೋಡಿ ಪರೀಕ್ಷೆ ಪದ್ಧತಿ
ಬೆಂಗಳೂರು, ಸೆ. 12: ಶಾಲಾ ಹಂತದಲ್ಲಿ ಓಪನ್ ಬುಕ್ ಎಕ್ಸಾಮ್ – ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ತೆರೆದ ಪುಸ್ತಕ ಪರೀಕ್ಷೆ - ಓಪನ್ ಬುಕ್ ಎಕ್ಸಾಂ ಪರಿಕಲ್ಪನೆಯನ್ನು ರಾಜ್ಯದಲ್ಲೂ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಹಲವು ತಜ್ಞರು ಇಂತಹ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಬುದ್ದಿಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್, ಹಲವು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸಮಗ್ರ ಚರ್ಚೆಯ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊಲಂಬೋಗೆ ಹೋಗಿದ್ದು ನಿಜ - ಹೆಚ್.ಡಿ.ಕೆ.
ಬೆಂಗಳೂರು, ಸೆ. 12: ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ “ಕೊಲಂಬೋ ಯಾತ್ರೆ” ಮಾಡಿರಲಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ ತಾವು ಏಳರಿಂದ ಎಂಟು ಬಾರಿ ಕೊಲಂಬೋ ಹೋಗಿದ್ದೆ, ಆದರೆ ಡ್ರಗ್ಸ್ ವಿಚಾರದಲ್ಲಿ ಉದ್ಯಮಿ ಪ್ರಶಾಂತ್ ಸಂಬರಗಿ ಹೇಳಿದಂತೆ ಸಂಜನಾ ಗಲ್ರಾನಿ ಜತೆಗಲ್ಲ ಎಂದು ಹೇಳಿದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ತಾವು “ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.