*ಗೋಣಿಕೊಪ್ಪಲು, ಸೆ. 12: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಲಾಡಿ ಹಾಡಿಯಲ್ಲಿ ಬೃಹತ್ ಗಾತ್ರದ ಮರವೊಂದು ಕೊಟ್ಟಿಗೆ ಮೇಲುರಳಿ ಕೊಟ್ಟಿಗೆ ಯೊಳಗಿದ್ದ ಐದು ಆಡುಗಳಲ್ಲಿ ಮೂರು ಆಡುಗಳು ಮರದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಿತಿಮತಿ ಸಮೀಪದ ಜಂಗಲಾಡಿ ಹಾಡಿಯಲ್ಲಿ ವಾಸವಿರುವ ಜೆ.ಎಂ. ಮಂಜು ಎಂಬುವರು ಜೀವ ನೋಪಾಯಕ್ಕಾಗಿ ಐದು ಆಡುಗಳನ್ನು ಸಾಕಿದ್ದರು. ಎರಡು-ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಆಡುಗಳನ್ನು ಮೇಯಲು ಬಿಡದೇ, ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು.

ಮಳೆ-ಗಾಳಿಯ ರಭಸಕ್ಕೆ ಸಮೀಪದ ತೋಟದಿಂದ ಧರೆಗುರುಳಿದ ದೊಡ್ಡ ಗಾತ್ರದ ಮರವೊಂದು ಕೊಟ್ಟಿಗೆ ಮೇಲೆ ಬಿದ್ದ ಪರಿಣಾಮ ಕೊಟ್ಟಿಗೆ ಮುರಿದು ಬಿದ್ದು, ಒಳಗಿದ್ದ ಆಡುಗಳಲ್ಲಿ ಮೂರು ಆಡುಗಳು ಮರದ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿವೆ. ಮರದ ಕೆಳಗೆ ಸಿಲುಕಿದ್ದ ಸತ್ತ ಆಡುಗಳನ್ನು, ಮರವನ್ನು ಕತ್ತರಿಸಿ ನಂತರ ಹೊರ ತೆಗೆಯಲಾಯಿತು.

ಬೃಹತ್ ಗಾತ್ರದ ಮರ ಬಿದ್ದುದರಿಂದ ಕೊಟ್ಟಿಗೆ ಹತ್ತಿರದಲ್ಲಿದ್ದ ವಾಸದ ಗುಡಿಸಲು ಮನೆಯು ಹಾನಿಗೊಳಗಾಗಿದೆ. ಅದೃಷ್ಟವಶಾತ್ ಕುಟುಂಬ ಸದಸ್ಯರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.