ಮಡಿಕೇರಿ, ಸೆ. 10: ಲಾರಿಯನ್ನು ಹಿಂದಿಕ್ಕುವ ಆತುರದಲ್ಲಿ ಎದುರುಗಡೆ ಬಂದ ವಾಹನವನ್ನು ಗಮನಿಸದೆ ಸನಿಹದಲ್ಲಿದ್ದ ಲಾರಿಗೆ ಕಾರು ಡಿಕ್ಕಿಯಾ ಗಿದ್ದು, ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಡಿಕೇರಿ-ಮೈಸೂರು ಹೆದ್ದಾರಿಯ ಕೆದಕಲ್ ಬಳಿ ಸಂಭವಿಸಿದೆ.

ಇಂದು ಮಧ್ಯಾಹ್ನ 2.30ರ ವೇಳೆಗೆ ತಮಿಳುನಾಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ (ಕೆಎ 01 ಎಜೆ 1155)ಯನ್ನು ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ಬಳಿ ಹಿಂದಿನಿಂದ ಬರುತ್ತಿದ್ದ ಮಾರುತಿ ಆಲ್ಟೋ ಕಾರು (ಕೆಎ 04 ಎಂಬಿ 6175) ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಮತ್ತೊಂದು ಕಾರು ಬಂದಾಗ ಎಡಕ್ಕೆ ತಿರುವಿ ಲಾರಿಗೆ ಡಿಕ್ಕಿಯಾಗಿದೆ. ನಜ್ಜುಗುಜ್ಜುಗೊಂಡ ಕಾರಿನೊಳಗಿದ್ದ ಗಾಯಗೊಂಡಿದ್ದ ಚಾಲಕ ರಾಜ ಎಂಬಾತನನ್ನು ಲಾರಿ ಚಾಲಕ ಈಶ್ವರನ್ ಹಾಗೂ ಸ್ಥಳಕ್ಕೆ ಧಾವಿಸಿದ ಪ್ರಮೋದ್ ಅವರುಗಳು ಬೇರೊಂದು ವಾಹನದಲ್ಲಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಲಾರಿ ಚಾಲಕ ಈಶ್ವರನ್ ನೀಡಿರುವ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.