ವೀರಾಜಪೇಟೆ, ಸೆ. 10: ವೀರಾಜಪೇಟೆಗೆ ಸಮೀಪದ ದೇವಣಗೇರಿ ಗ್ರಾಮದ ಪಿ.ಎಚ್. ಮಹಮ್ಮದ್ ಎಂಬವರ ಪುತ್ರಿ ಪಿ.ಎಂ. ನಾಜೀರ (27) ಎಂಬಾಕೆಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಆಕೆಯ ಪತಿ, ಮಾವ, ಅತ್ತೆ, ಮೈದುನ ಮಾನಸಿಕ ಕಿರುಕುಳ, ಜೀವಭಯದ ಬೆದರಿಕೆ ಹಾಕಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಈ ನಾಲ್ಕು ಮಂದಿ ವಿರುದ್ಧ ಐ.ಪಿ.ಸಿ. 1860, (ಯು/ಎಸ್-498ಎ, 504, 506, 323,34) ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ದೇವಣಗೇರಿ ಗ್ರಾಮದ ಪಿ.ಎಚ್ .ಮಹಮ್ಮದ್ ಅವರ ಮಗಳು ಪಿ.ಎಂ.ನಾಜೀರ ಎಂಬಾಕೆಯನ್ನು ತಾ.7-1-2018 ರಂದು ವೀರಾಜಪೇಟೆಯ ಗೌರಿಕೆರೆಯ ಬಳಿಯಿರುವ ಮದರಸದಲ್ಲಿ ಮುಸ್ಲೀಂ ಧರ್ಮದಂತೆ ಸಾಂಪ್ರದಾಯಬದ್ಧವಾಗಿ ಕೊಡ್ಲಿಪೇಟೆ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಎಂ.ಕೆ. ಹನೀಫ್ ಎಂಬವರ ಮಗ ಸಲೀಂ ಆಲಿ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ಸಮಯದಲ್ಲಿ 35 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ಕೊಡಲಾಗಿದೆ. ನಾಜೀರ ಹಾಗೂ ಸಲೀಂ ಆಲಿ ಕೆಲವು ತಿಂಗಳುಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ನಂತರ ಪತಿ ಸಲೀಂ ಆಲಿ ಉದ್ದೇಶಪೂರ್ವಕವಾಗಿ ಸಣ್ಣ ಪುಟ್ಟ ವಿಷಯಗಳಿಗೂ ಜಗಳ ತೆಗೆದು ಕಿರುಕುಳ, ಮಾನಸಿಕ ಹಿಂಸೆ ನೀಡಿ ಆಕೆಯ ಮೇಲೆ ಸಂದೇಹ ಪಟ್ಟು ನಿಂದಿಸುತ್ತಿದ್ದರು. ವಿವಾಹದ ನಂತರ ಪತಿ ಸಲೀಂ ಆಲಿ ಸೌದಿ ಅರೇಬಿಯಾಕ್ಕೆ ಉದ್ಯೋಗದ ನಿಮಿತ್ತ ತೆರಳಿದ್ದು, ಅಲ್ಲಿಂದಲೂ ಮೊಬೈಲ್ನಲ್ಲಿ ತನ್ನನ್ನು ನಿಂದಿಸಿ ಕಿರುಕುಳ ನೀಡುತ್ತಿದ್ದರು. ಪತ್ನಿ ನಾಜೀರಳಿಗೆ ಗೊತ್ತಿಲ್ಲದಂತೆ ಈಚೆಗೆ ಮಡಿಕೇರಿಯಲ್ಲಿ ವಕೀಲರ ಮುಂದೆ ವಿವಾಹ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬಲತ್ಕರಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಮೇರೆಗೆ ಪೊಲೀಸರು ಪತಿ ಸಲೀಂ ಆಲಿ, ಮಾವ ಎಂ.ಕೆ. ಹನೀಫ್, ಅತ್ತೆ ಅಮಿನಾ, ಮೈದುನ ಅಶ್ರಫ್ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಕಾನೂನು ಬಾಹಿರ ತಲಾಕ್ ಪತ್ರ
ಸೌದಿ ಅರೇಬಿಯಾದಲ್ಲಿರುವ ಪತಿ ಸಲೀಂ ಆಲಿ ಕಾನೂನುಬಾಹಿರವಾಗಿ ಇಂಟರ್ನೆಟ್ ಮೂ¯ಕ ದೇವಣಗೇರಿಯ ಜುಮ್ಮಾ ಮಸೀದಿಗೆ ಎರಡು ಬಾರಿ ಹಾಗೂ ನಾಜೀರಾಳಿಗೆ ಒಂದು ಬಾರಿ ತಲಾಕ್ಪತ್ರ ಕಳಿಸಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ತಲಾಕ್ ಪತ್ರವನ್ನು ಮಸೀದಿಯ ಧರ್ಮ ಗುರುಗಳ ಹಾಗೂ ಎರಡು ಕಡೆಗಳ ಹಿರಿಯರ ಸಮ್ಮುಖದಲ್ಲಿ ನೀಡಿ ಸಮ್ಮತಿ ಪಡೆಯಬೇಕಾಗಿದೆ. ಅದರಲ್ಲೂ ಇಂಟರ್ನೆಟ್ನಲ್ಲಿ ತಲಾಕ್ ಕಳುಹಿಸುವುದನ್ನು ಕಳೆದ ಕೆಲವು ವರ್ಷಗಳಿಂದಲೇ ಕಾನೂನು ಪ್ರಕಾರ ನಿಷೇಧಿಸಲಾಗಿದೆ. ಈ ಸಂಬಂಧದಲ್ಲೂ ನಾಜೀರಾಳ ಪೋಷಕರು ವೀರಾಜಪೇಟೆ ಪೊಲೀಸರಿಗೆ ದೂರು ನೀಡಲಿರುವುದಾಗಿ ತಿಳಿಸಿದ್ದಾರೆ.