ಸುಂಟಿಕೊಪ್ಪ, ಸೆ. 10: ಅನೇಕ ದಶಕಗಳಿಂದ ಸುಂಟಿಕೊಪ್ಪ ಆಟೋ ಮಾಲೀಕರು ಹಾಗೂ ಚಾಲಕರು ಆಟೋ ರಿಕ್ಷಾ ನಿಲ್ದಾಣವಿಲ್ಲದೆ ಪರಿತಪ್ಪಿಸುತಿದ್ದು, ಇದೀಗ ಉಲುಗುಲಿ ರಸ್ತೆ ಬದಿಯಲ್ಲಿ ಆಟೋ ನಿಲ್ದಾಣಕ್ಕೆ ಹಸಿರು ನಿಶಾನೆ ದೊರಕಿದೆ.

ಸುಂಟಿಕೊಪ್ಪದಲ್ಲಿ 200ಕ್ಕೂ ಅಧಿಕ ಆಟೋರಿಕ್ಷಾವಿದ್ದು, ಆಟೋ ನಿಲ್ದಾಣಕ್ಕೆ ಜಾಗ ಗುರುತಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಆಟೋ ಮಾಲೀಕರು ಹಾಗೂ ಚಾಲಕರ ಸಂಘದವರು ಅನೇಕ ಬಾರಿ ಮನವಿ ಸಲ್ಲಿಸಿದರೂ ಸೂಕ್ತ ಜಾಗ ಸಿಕ್ಕಿರಲಿಲ್ಲ. ಸಂತೆ ದಿನವಾದ ಭಾನುವಾರ ವಾಹನ ಹಾಗೂ ಜನದಟ್ಟಣೆ ಅಧಿಕವಾಗಿರುತ್ತಿದ್ದ ಹಿನ್ನೆಲೆ ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಭಾನುವಾರ ರಾಷ್ಟ್ರೀಯ ಹೆದ್ದಾರಿ ಬಳಿ ಆಟೋ ರಿಕ್ಷಾವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅನುಮತಿ ನೀಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ನಿಲ್ದಾಣ ಮಾಡುವುದು ಸರಿಯಲ್ಲ. ಇದು ಅವಘಡಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಸುಪ್ರಿಂಕೋರ್ಟ್ ಆದೇಶ ನೀಡಿದ್ದರಿಂದ ಸುಂಟಿಕೊಪ್ಪ ಗ್ರಾ.ಪಂ. ಆಡಳಿತಾಧಿಕಾರಿ ದರ್ಶನ್ ಹಾಗೂ ಪಿಡಿಓ ವೇಣುಗೋಪಾಲ್ ಅವರು ಚರ್ಚಿಸಿ ಇದೀಗ ಉಲುಗುಲಿ (ಮಾರುಕಟ್ಟೆ) ರಸ್ತೆಯಲ್ಲಿ ವಾರದ 7 ದಿನವೂ ಆಟೋವನ್ನು ನಿಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ. ಗ್ರಾ.ಪಂ.ನ ಈ ಕಾರ್ಯಕ್ಕೆ ಸುಂಟಿಕೊಪ್ಪ ಆಟೋ ಚಾಲಕ ಸಂಘದ ಅಧ್ಯಕ್ಷ ಸಂತೋಷ್ (ದಿನು) ಹಾಗೂ ಪದಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.