ವೀರಾಜಪೇಟೆ, ಸೆ.11: ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುವ ಅನೇಕ ಸಂಘ ಸಂಸ್ಥೆಗಳಿರುವುದರಿಂದ ಕನ್ನಡ ಕಾರ್ಯಕ್ರಮಗಳು ರಾಜ್ಯದಲ್ಲಿಯೇ ಕೊಡಗಿನಲ್ಲಿ ಹೆಚ್ಚು ಯಶಸ್ಸನ್ನು ಕಾಣಲು ಸಾಧ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಇಂದು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕ ಅಂತರ್ಜಾಲ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಡಗಿನ ಗಡಿನಾಡಾದ ವೀರಾಜಪೇಟೆ ಭಾಗದಿಂದಲೇ ಅನೇಕ ಕನ್ನಡ ಕಾರ್ಯಕ್ರಮಗಳು ಆರಂಭವಾಗಿ ನಂತರ ಜಿಲ್ಲೆಯಾದ್ಯಂತ ನಡೆಯುವುದು ವಿಶಿಷ್ಟವಾಗಿದೆ. ಕೋವಿಡ್ ಕಾರಣ ಈ ಬಾರಿ ಯಾವ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಸಾಹಿತ್ಯ ಪರಿಷತ್ ಉತ್ತಮ ಕೆಲಸ ಮಾಡಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಜಿಲ್ಲೆಗಳಿಗಿಂತಲೂ ಮಾದರಿಯಾಗಿದ್ದವು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಹೇಳಿದರು.
ಕಾವೇರಿ ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲೆ ಡಾ ಎ.ಎಸ್.ಪೂವಮ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ಕವನ ರಚನೆ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕೆಲಸ. ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ಕನ್ನಡ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿ ವಿವಿಧ ಕಲಾ ಪ್ರಾಕಾರಗಳನ್ನು ನಡೆಸುವ ಆಸಕ್ತಿ ಇದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್‍ನ ಸಹಕಾರ ನಿರೀಕ್ಷಿಸುವುದಾಗಿ ಹೇಳಿದರು.
ಸಾಹಿತಿ, ನಾ. ಕನ್ನಡಿಗ ಟೋಮಿ ಥೋಮಸ್ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜ: ತಿಮ್ಮಯ್ಯ ಅವರ ಬದುಕು ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಾನ್ಸನ್ ಕಾವೇರಿ ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ನಾಣಯ್ಯ ಉಪಸ್ಥಿತರಿದ್ದರು.
ಈ ಸಂದರ್ಭ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ನಳಿನಾಕ್ಷಿ, ಕನ್ನಡ ವಿಭಾಗದ ಉಪನ್ಯಾಸಕ ಶಂಕರನಾರಾಯಣ, ಹಿರಿಯ ಉಪನ್ಯಾಸಕ ಆನಂದಕಾರ್ಲ, ಉಪನ್ಯಾಸಕರಾದ ಅಂಬಿಕಾ, ಡಾ ರೇವತಿ ಪೂವಯ್ಯ, ವೀಣಾ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.