ಕೂಡಿಗೆ, ಸೆ. 11 ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಆನೆ ಕೆರೆಯ ಸರ್ವೆ ಕಾರ್ಯವನ್ನು ಸರಕಾರದ ಆದೇಶದಂತೆ ನಿಯಮಾನುಸಾರವಾಗಿ ತಾಲೂಕು ತಹಶೀಲ್ದಾರರ ಸೂಚನೆಯಂತೆ ಸರ್ವೆ ಇಲಾಖೆಯ ವತಿಯಿಂದ ನಡೆಸಲಾಗಿತ್ತು. ಆದರೆ ಸರ್ವೆ ಸಮರ್ಪಕವಾಗಿ ನಡೆದಿಲ್ಲ ಎಂದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ. ಆನೆಕೆರೆಯ ವಿಸ್ತೀರ್ಣ ಕಂದಾಯ ಇಲಾಖೆಯ ಪ್ರಕಾರ 11.87 ಎಕರೆ ಅದರೆ ಹಿಂದಿನಿಂದಲೂ ಇದ್ದ ಜಾಗವನ್ನು ಸರ್ವೆ ಮಾಡಿಲ್ಲ ಎಂದು ಕೂಡುಮಂಗಳೂರು ಗ್ರಾ. ಪಂ. ಮಾಜಿ ಸದಸ್ಯೆ ಫಿಲೋಮೀನ್, ವರದರಾಜದಾಸ್, ಕಿರಣ್, ಮಂಜುನಾಥ, ದಿನೇಶ್ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಮಿಕ ಕುಟುಂಬಗಳು ಅಧಿಕವಿದ್ದು, ಈ ಹಿಂದೆ ಕಂದಾಯ ಇಲಾಖೆ ಜಾಗ ಗುರುತಿಸಿದರೂ; ಸಂಬಂಧ ಪಟ್ಟವರು ಕಾರ್ಮಿಕರಿಗೆ ನಿವೇಶನ ಕಲ್ಪಿಸಿಲ್ಲವೆಂದು ಟೀಕಿಸಿದ್ದಾರೆ.