ಜಲ ಮರು ಬಳಕೆಗೆ ಅದ್ಯತೆ
ಬೆಂಗಳೂರು, ಸೆ. 10: ತ್ಯಾಜ್ಯ ನೀರು ಕೆರೆ-ಕಟ್ಟೆಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕಾಗಿದ್ದು, ಜಲಮರುಪೂರಣ, ಜಲ ಮರು ಬಳಕೆಗೆ ಅದ್ಯತೆ ನೀಡಬೇಕಾಗಿದೆ. ಇಂತಹ ಕ್ರಮದಿಂದ ಜಲ ಮೂಲಗಳ ಸಂರಕ್ಷಣೆ ಸಾಧ್ಯವಾಗಲಿದ್ದು, ಪ್ರಕೃತಿಯ ಸಂರಕ್ಷಣೆ ಮಾಡಲು ಸಹಕಾರಿಯಾಗುವ ಮಹತ್ವದ ಉದ್ದೇಶದಿಂದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲದಲ್ಲಿ ಹೊಸದಾಗಿ ನಿರ್ಮಿಸಿರುವ 210 ದಶ ಲಕ್ಷ ಲೀಟರ್ ಸಾಮಥ್ರ್ಯದ ಮಧ್ಯಂತರ ತ್ಯಾಜ್ಯ ನೀರು ರೇಚಕ ಸ್ಥಾವರ ಉದ್ಘಾಟಿಸಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಬರುವಂತಹ ಕೆರೆಗಳು ಇನ್ನಷ್ಟು ಮಲಿನಗೊಳ್ಳುವುದನ್ನು ತಪ್ಪಿಸಲು ಸಹಕಾರಿಯಾಗಿವೆ ಎಂದರು.
ಗ್ರಾ.ಪಂ. ಆಪರೇಟರ್ಗಳಿಗೆ ಕೋವಿಡ್ ಡ್ಯೂಟಿ
ಬೆಂಗಳೂರು, ಸೆ. 10: ಕೋವಿಡ್ -19 ನಿಯಂತ್ರಣ ಸಂಬಂಧ ಅಗತ್ಯ ಕ್ರಮಕೈಗೊಳ್ಳಲು ಮತ್ತು ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಗ್ರಾಮ ಪಂಚಾಯಿತಿಯಲ್ಲಿನ ಡಾಟಾ ಎಂಟ್ರಿ ಆಪರೇಟರುಗಳ ಸೇವೆ ಪಡೆಯಲು ಸರ್ಕಾರ ಸೂಚಿಸಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ. ಹೀಗಾಗಿ ಕೋವಿಡ್-19 ಸೊಂಕು ನಿಯಂತ್ರಣ ಹಾಗೂ ಆರೋಗ್ಯ ಇಲಾಖೆಯ ಇತರ ಕಾರ್ಯಕ್ರಮಗಳ ಬಗ್ಗೆ ದಾಖಲಾತಿ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಇದ್ದು, ಡಾಟಾ ಎಂಟ್ರಿ ಆಪರೇಟರ್ಗಳನ್ನು ಒದಗಿಸಿಕೊಡುವ ಅಗತ್ಯವಿರುತ್ತದೆ.
ರೂ. 31.35 ಕೋಟಿ ಮೌಲ್ಯದ ಆಸ್ತಿ ವಶ
ಬೆಳಗಾವಿ, ಸೆ. 10: ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ರೂ. 31.35 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ರೂ. 232 ಕೋಟಿ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಈ ಬೆಳವಣಿಗೆ ನಡೆದಿದೆ. ಬೆಳಗಾವಿಯಲ್ಲಿ ಆನಂದ್ ಅಪ್ಪುಗೋಳ ಒಡೆತನದಲ್ಲಿರುವ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿರುವ ಖಾಲಿ ನಿವೇಶನ, ಬಿ.ಕೆ. ಬಾಳೆಕುಂದ್ರಿಯಲ್ಲಿನ ಮನೆ ಹಾಗೂ ನೆಹರು ನಗರದಲ್ಲಿರುವ ಕಚೇರಿ, ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸಂಗೊಳ್ಳಿ ರಾಯಣ್ಣ ಕೊ ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಯಿಟ್ಟಿದ್ದ ಸಾವಿರಾರು ಜನರ ರೂ. 250 ಕೋಟಿಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿದ ಆರೋಪ ಇವರ ಮೇಲಿದೆ.
ಶಿಕ್ಷಣದ ಬಗ್ಗೆ ಇಂದು ಪ್ರಧಾನಿ ಮಾತು
ನವದೆಹಲಿ, ಸೆ. 10: ರಾಷ್ಟ್ರೀಯ ಶಿಕ್ಷಣ ನೀತಿ- 2020 (ಎನ್ಇಪಿ -2020) ಅಡಿಯಲ್ಲಿ ``21ನೇ ಶತಮಾನದಲ್ಲಿ ಶಾಲಾ ಶಿಕ್ಷಣ'' ಕುರಿತ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಲಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಶಿಕ್ಷಣ ಸಚಿವಾಲಯವು ಸೆ. 11 ರಂದು ಶಿಕ್ಷಣ ಪರ್ವ ಅಂಗವಾಗಿ ಈ ಎರಡು ದಿನಗಳ ಸಮಾವೇಶವನ್ನು ಆಯೋಜಿಸುತ್ತಿದೆ.
ಭಾರತ-ಜಪಾನ್ ಒಪ್ಪಂದಕ್ಕೆ ಸಹಿ
ನವದೆಹಲಿ, ಸೆ. 10: ಚೀನಾ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಭಾರತ-ಜಪಾನ್ ಕೈ ಜೋಡಿಸಿದ್ದು ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ-ಜಪಾನ್ ಪರಸ್ಪರ ಲಾಜಿಸ್ಟಿಕ್ಸ್ ಸಪೋರ್ಟ್ ಅರೇಂಜ್ಮೆಂಟ್ಸ್(ಎಂಎಲ್ಎಸ್ಎ)ಗೆ ಸಹಿ ಹಾಕಿದ್ದು ಚೀನಾದ ವಿಸ್ತರಣಾವಾದದ ನಡೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಭಾರತದ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹಾಗೂ ಜಪಾನ್ನ ರಾಯಭಾರಿ ಸುಜೂಕಿ ಸತೋಶಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನಿಕಟವಾದ ಸಹಕಾರ, ಪರಸ್ಪರರ ಮಿಲಿಟರಿ ಸೌಲಭ್ಯಗಳ ಕಾರ್ಯಸಾಧ್ಯತೆ ಮತ್ತು ಬಳಕೆಗೆ ಸೂಕ್ತವಾದ ಚೌಕಟ್ಟು ನಿರ್ಮಿಸಲು ಈ ಒಪ್ಪಂದ ಸಹಕಾರಿಯಾಗಿದೆ. ದ್ವಿಪಕ್ಷೀಯ ತರಬೇತಿ ಚಟುವಟಿಕೆಗಳಿಗೆ ಅಗತ್ಯವಿರುವ ಸೇನೆಗಳನ್ನು ಒದಗಿಸುವುದಕ್ಕೂ ಸಹ ಈ ಒಪ್ಪಂದ ಸಹಕಾರಿಯಾಗಲಿದೆ. ಇದೇ ಮಾದರಿಯ ಒಪ್ಪಂದಗಳನ್ನು ಭಾರತ ಅಮೇರಿಕಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಸಿಂಗಪೂರ್, ಆಸ್ಟ್ರೇಲಿಯಾದೊಂದಿಗೂ ಮಾಡಿಕೊಂಡಿದೆ.
ಅ. 4 ರಿಂದ ಯುಪಿಎಸ್ಸಿ ಪರೀಕ್ಷೆ
ನವದೆಹಲಿ, ಸೆ. 10: ಅಕ್ಟೋಬರ್ 4 ರಂದು ನಡೆಯಲಿರುವ ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಯುಪಿಎಸ್ಸಿ ತಿಳಿಸಿದೆ. ಅಭ್ಯರ್ಥಿಗಳು ತಾವೇ ಸ್ವತ: ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್ ತರಬೇಕು ಎಂದು ಯುಪಿಎಸ್ಸಿ ಹೇಳಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತಿತರ ಹುದ್ದೆಗಳ ಆಯ್ಕೆಗಾಗಿ ವಾರ್ಷಿಕವಾಗಿ ಮೂರು ಹಂತಗಳಲ್ಲಿ ಅಂದರೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಯುಪಿಎಸ್ಸಿ, ಪರೀಕ್ಷಾ ಕೇಂದ್ರದ ಆವರಣ ಹಾಗೂ ಕೊಠಡಿ ಯೊಳಗೆ ಅಭ್ಯರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ನಿಯಮ ಪಾಲಿಸಬೇಕು ಎಂದು ತಿಳಿಸಿದೆ.
ಇಬ್ಬರು ಜೈಶ್ ಉಗ್ರರ ಬಂಧನ
ಶ್ರೀನಗರ, ಸೆ. 10: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಜೈಶ್ ಇ ಮಹಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿದೆ. ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಜೈಶ್ ಇ ಮಹಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ರೂ. 7 ಲಕ್ಷ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. ಸೇನಾ ಮೂಲಗಳು ತಿಳಿಸಿರುವಂತೆ ಬಂಧಿತರಾದ ಉಗ್ರರಿಂದ ಒಂದು ಎಕೆ-47 ರೈಫಲ್, ಎರಡು ಗ್ರೆನೇಡ್, 30 ಕಾಡುತೂಪುಗಳನ್ನು ವಶಪಡಿಸಿಕೊಳ್ಳಲಾಗಿದೆ.