ಗೋಣಿಕೊಪ್ಪಲು, ಸೆ. 10: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಹಾಗೂ ವಿಪರೀತ ಗಾಳಿಯಿಂದ ಭೂ ಕುಸಿತ ಸೇರಿದಂತೆ ರೈತರಿಗಾಗುತ್ತಿರುವ ಅಪಾರ ನಷ್ಟದ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮುಂದಾಳತ್ವದಲ್ಲಿ ಜಿಲ್ಲೆಗೆ ಮಳೆ ಹಾನಿ ಅಧ್ಯಯನಕ್ಕೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ರೈತರಿಗೆ ತುಂಬಲಾರದ ನಷ್ಟವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‍ಡಿಆರ್‍ಎಫ್ ಇವರ ವತಿಯಿಂದ ನೀಡುವ ಪರಿಹಾರ ಏನೇನೂ ಸಾಲದಾಗಿದೆ.

ಕೊಡಗಿಗೆ ಪ್ರಕೃತಿ ವಿಕೋಪದಿಂದಾದ ನಷ್ಟದ ಬಗ್ಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಕೇಂದ್ರ ತಂಡದ ಗಮನ ಸೆಳೆದರು.

ಈ ಸಂದರ್ಭ ಕರ್ನಾಟಕ ರೈತ ಸಂಘದ ವಿವಿಧ ಹೋಬಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.