ಸೋಮವಾರಪೇಟೆ,ಸೆ.10: ಸೋಮವಾರಪೇಟೆ ಪಟ್ಟಣದಿಂದ ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಶನಿವಾರಸಂತೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಬೈಕ್ ನಡುವೆ ಸಮೀಪದ ಕಿಬ್ಬೆಟ್ಟ ಎಸ್ಟೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಚಾಲಕ ಗಂಭೀರ ಗಾಯಗೊಂಡಿ ರುವ ಘಟನೆ ಇಂದು ಸಂಜೆ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿ ಜಗದೀಶ್ ಎಂಬವರು ಚಾಲಿಸುತ್ತಿದ್ದ ಕಾರು ಮತ್ತು ಶನಿವಾರಸಂತೆಯ ಪ್ರದೀಪ್ ಎಂಬಾತ ಓಡಿಸುತ್ತಿದ್ದ ಬೈಕ್ ನಡುವೆ ಅವಘಡ ಸಂಭವಿಸಿದೆ. ಕಿಬ್ಬೆಟ್ಟ ಎಸ್ಟೇಟ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಆಗಮಿಸಿದ ಬೈಕ್, ಕಾರಿನ ಮುಂಭಾಗಕ್ಕೆ ಗುದ್ದಿದೆ.
ಪರಿಣಾಮ ಬೈಕ್ ಸವಾರ ಕೆಳಬಿದ್ದಿದ್ದು, ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಕಾರಿನ ಮಾಲೀಕರೇ ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿದ್ದು, ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ಸಾಗಿಸಲಾಗಿದೆ.
ಘಟನೆಯಿಂದ ಬೈಕ್ ಹಾಗೂ ಕಾರಿನ ಮುಂಭಾಗ ಜಖಂಗೊಂಡಿದ್ದು, ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್, ಮುಖ್ಯ ಪೇದೆ ಶಿವಕುಮಾರ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.