ಮಡಿಕೇರಿ, ಸೆ. 10: ದಕ್ಷಿಣಕೊಡಗಿನ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಕೂಟಿಯಾಲ ಮಾರ್ಗವಾಗಿ ಮಡಿಕೇರಿ, ಸೆ. 10: ದಕ್ಷಿಣಕೊಡಗಿನ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಕೂಟಿಯಾಲ ಮಾರ್ಗವಾಗಿ ಕಾಡುಪಾಲಾಗಿದ್ದು, ಇದೀಗ ಸುಮಾರು 20 ವರ್ಷಗಳೇ ಕಳೆದು ಹೋಗಿವೆ.ಬಿ.ಶೆಟ್ಟಿಗೇರಿ - ಬಾಡಗರಕೇರಿ ಗ್ರಾಮದ ನಡುವೆ ಹರಿಯುವ ಬರಪೊಳೆಗೆ ಕೂಟಿಯಾಲ ಎಂಬಲ್ಲಿ ಸೇತುವೆಯನ್ನು ನಿರ್ಮಿಸಿ ರಸ್ತೆ ಸಂಪರ್ಕ ಕಲ್ಪಿಸಿದಲ್ಲಿ ಆ ವಿಭಾಗದ ಜನತೆಗೆ ಬಹುತೇಕ ತಾಲೂಕು ಕೇಂದ್ರ ವೀರಾಜಪೇಟೆಗೆ 20 ಕಿ.ಮೀ. ಗೂ ಅಧಿಕ ಅಂತರ ಕಡಿಮೆಯಾಗುತ್ತಿತ್ತು. ಈ ಕಾರಣದಿಂದಾಗಿ ಯಂ.ಸಿ.ನಾಣಯ್ಯ ಅವರು ಸಚಿವರಾಗಿದ್ದ ಸಂದರ್ಭ 1996ರಲ್ಲಿ ನಬಾರ್ಡ್ ಮೂಲಕ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೇತುವೆ ನಿರ್ಮಾಣಕ್ಕೆ ರೂ. 69.55 ಲಕ್ಷ ಅನುದಾನ ಮಂಜೂರಾಗಿದ್ದು, ಬೃಹತ್ ಸೇತುವೆ ಕೆಲಸ 2000ನೇ ಇಸವಿ ವೇಳೆಗೆ ಬಹುತೇಕ ಪೂರ್ಣಗೊಂಡಿದೆ. ಈಗಲೂ ಪೂರ್ಣ ಗೊಂಡಿರುವ ಈ ಸೇತುವೆ ಬರಪೊಳೆಯ ನಡುವೆ ಯಾವ ಪ್ರಯೋಜನಕ್ಕೂ ಇಲ್ಲದಂತೆ ನಿಂತಿರುವದನ್ನು ಕಾಣಬಹುದು. ಎದುರಾದ ಸಮಸ್ಯೆ : ರೂ. 69.55 ಲಕ್ಷ ವೆಚ್ಚದಲ್ಲಿ ಈ ಸೇತುವೆಯೇನೋ ನಿರ್ಮಾಣಗೊಂಡಿತಾದರೂ, ಎದುರಾಗಿದ್ದು ರಸ್ತೆಯ ವಿವಾದ. ಬಿ.ಶೆಟ್ಟಿಗೇರಿ ಕಡೆಯಿಂದ ಸೇತುವೆ ತನಕ ಸಮಸ್ಯೆ ಇಲ್ಲವಾದರೂ ಬಾಡಗರಕೇರಿ ಕಡೆಯಿಂದ ಬರುವ ಮಾರ್ಗ ಸುಮಾರು 600 ಮೀಟರ್‍ನಷ್ಟು ದೂರ ವನ್ಯಜೀವಿ ತಾಣದ ನಡುವೆ ಬರಲಿದೆ ಎಂಬ ಕಾರಣಕ್ಕಾಗಿ ಇದಕ್ಕೆ ತಡೆಯುಂಟಾಗಿತ್ತು. ಈ ಬಗ್ಗೆ ಸೂಕ್ತ ನಿಯಮ ಪಾಲಿಸಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಕೆಲವು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು.

ಇದೇ ಸಂದರ್ಭದಲ್ಲಿ ಮಡಿಕೇರಿಯಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಕಡಮಕಲ್ಲು ರಸ್ತೆ ವಿವಾದ, ದಬ್ಬಡ್ಕ ರಸ್ತೆ ವಿವಾದವೂ ಇದಕ್ಕೆ ಸೇರಿಕೊಂಡಿತ್ತು. ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಹಾಗೂ ಇತರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮೇಲ್ಮಟ್ಟದಲ್ಲಿ ನ್ಯಾಯಾಲಯದ ಮೂಲಕ ಪ್ರಶ್ನಿಸಿದ್ದರು. ಇದರಂತೆ ಕೂಟಿಯಾಲ ರಸ್ತೆ ಕೆಲಸಕ್ಕೆ ಅಡಚಣೆಯಾಗಿ ಕೆಲಸ ಸ್ಥಗಿತಗೊಂಡಿದೆ.

ಸೇತುವೆ ನಿರ್ಮಾಣದ ಬಳಿಕ ರಸ್ತೆ ಸಂಪರ್ಕಕ್ಕೆಂದು ಬಿ.ಶೆಟ್ಟಿಗೇರಿ ಕಡೆಯಿಂದ ರೂ. 1 ಕೋಟಿ ಹಣ ಮಂಜೂರಾಗಿ ಇದರಲ್ಲಿ ಸೇತುವೆ ತನಕ ಸುಮಾರು 18 ಲಕ್ಷದಲ್ಲಿ ಕಚ್ಚಾ ರಸ್ತೆಯೂ ನಿರ್ಮಾಣವಾಗಿದೆ. ಬಿರುನಾಣಿ ಕಡೆಯಿಂದ ರೂ. 1.17 ಕೋಟಿ ಅನುದಾನ ಮಂಜೂರಾತಿಯಾಗಿದ್ದರೂ ಅರಣ್ಯ ಪ್ರದೇಶದ ವಿವಾದದಿಂದಾಗಿ ಇದು ಟೆಂಡರ್ ಪ್ರಕ್ರಿಯೆಗಷ್ಟೇ ಸೀಮಿತವಾಗಿ ಯಾವದೇ ಕೆಲಸ ಮುಂದುವರಿಯಲಿಲ್ಲ.

ಒಪ್ಪಂದದಂತೆ ಕೆಲಸ :ಈ ಯೋಜನೆ ರೂಪುಗೊಂಡಾಗ ಅರಣ್ಯ ಇಲಾಖೆ ಹಾಗೂ

(ಮೊದಲ ಪುಟದಿಂದ) ಲೋಕೋಪಯೋಗಿ ಇಲಾಖೆ ಮೂಲಕ ಒಡಂಬಡಿಕೆ (ಎಂಓಯು)ಯಂತೆ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅರಣ್ಯ ಪ್ರದೇಶದ ನಡುವೆ ರಸ್ತೆ ನಿರ್ಮಾಣಕ್ಕೆ ಅನುಸರಿಸಬೇಕಾಗಿದ್ದ ಸೂಕ್ತ ನಿಯಮವನ್ನು ಪಾಲಿಸಿಲ್ಲ ಎಂಬದು ವಿವಾದ ಆರಂಭವಾಗಲು ಕಾರಣವಾಗಿತ್ತು.

ಸಿಗದ ಸ್ಪಂದನ

ವಿವಾದದ ಬಳಿಕ ಆ ವ್ಯಾಪ್ತಿಯ ಸಾರ್ವಜನಿಕರು, ಜನಪ್ರತಿನಿಧಿಗಳು, ಇನ್ನಿತರ ಪ್ರಮುಖರು ಯೋಜನೆ ಕಾರ್ಯಗತಕ್ಕೆ ಸಾಕಷ್ಟು ಪ್ರಯತ್ನ ನಡೆಸಿದರಾದರೂ ಫಲಸಿಗಲಿಲ್ಲ. ಈ ವಿಚಾರ ವಿಧಾನಸಭೆ - ವಿಧಾನಪರಿಷತ್ ನಲ್ಲೂ ಪ್ರಸ್ತಾಪಗೊಂಡಿದೆ. ಹಲವು ಭರವಸೆಗಳು, ಸಲಹೆಗಳು ಬಂದಿವೆಯೇ ವಿನಹ ಸುಮಾರು 20 ಕಿ.ಮೀ. ಅಂತರ ಕಡಿಮೆ ಮಾಡುವ ಅಥವಾ ಈಗಾಗಲೇ ವೆಚ್ಚವಾಗಿ ಹೋಗಿರುವ ಸುಮಾರು 1 ಕೋಟಿ ಹಣದ ಕೆಲಸವನ್ನು ಸದ್ಭಳಕೆ ಮಾಡಿಕೊಳ್ಳುವ ಯಾವೊಂದು ಪ್ರತಿಫಲವೂ ಈ ತನಕ ಯಾರಿಂದಲೂ ದೊರೆತಿಲ್ಲ.

ಬೃಹತ್ ಸೇತುವೆಯೊಂದು ಇದಕ್ಕೆ ಸಾಕ್ಷಿ ಎಂಬಂತೆ ಕಣ್ಣೆದುರೇ ನಿಂತಿದ್ದರೂ ಯಾರೂ ಈ ಬಗ್ಗೆ ವ್ಯವಹರಿಸದಿರುವದು ವಿಷಾದಕರವೇ ಆಗಿದೆ. ಈಗಿನ ಈ ಕ್ಷೇತ್ರದ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷ, ಬಿರುನಾಣಿಯವರೇ ಆಗಿರುವ ನೆಲ್ಲೀರ ಚಲನ್ ಸೇರಿದಂತೆ ಬಹುತೇಕ ಮಂದಿಯಲ್ಲಿ ಯೋಜನೆಗೆ ಅಡ್ಡಿಯಾಗಿರುವ ಅಸಮಾಧಾನವಿದೆ. ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರಲ್ಲೂ ಅಸಮಾಧಾನವಿದೆ. ಇವರು ಹಾಗೂ ಈಗಿನ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಜನತೆಯ ಬೇಡಿಕೆಗೆ ಸಹಮತದೊಂದಿಗೆ ನಡೆಸಿದ ಕೆಲವು ಪ್ರಯತ್ನವೂ ಪ್ರಯೋಜನ ಕಂಡಿಲ್ಲ.