ಕಣಿವೆ, ಸೆ. 9: ಈ ಬಾರಿ ರೈತರು ಅತೀ ಹೆಚ್ಚಾಗಿ ಬೆಳೆದಿದ್ದ ಜೋಳದ ಬೆಳೆಗೆ ಬೆಲೆ ಇಳಿಕೆಯಾಗಿದೆ. ಅಂದರೆ ಒಂದು ಕ್ವಿಂಟಾಲ್ ಜೋಳದ ಫಸಲಿಗೆ (ಹಸಿ ಜೋಳ) ಈಗ ಕೇವಲ 800ರಿಂದ 850 ರೂ. ಇದೆ. ಒಣಗಿಸಿದ ಜೋಳಕ್ಕೆ 1300 ರೂ.ನಿಂದ 1400. ರೂ. ಇದೆ. ಕಳೆದ ವರ್ಷ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಇದೇ ಹಸಿ ಜೋಳದ ಫಸಲಿಗೆ ಕ್ವಿಂಟಾಲ್ ಒಂದಕ್ಕೆ 1300ರಿಂದ 1400 ಇತ್ತು. ಒಣಗಿದ ಜೋಳಕ್ಕೆ 1600ರಿಂದ 1700 ರೂ. ಇತ್ತು.
ಅಂದರೆ ಈ ಬಾರಿ ಕೊರೊನಾ ರೈತಾಪಿಗಳ ಮೇಲೆ ಮಾಡಿ ಹೋದ ನಷ್ಟ ಲೆಕ್ಕಕ್ಕೆ ನಿಲುಕದಷ್ಟು. ಹಣವಂತ ರೈತರು ಈ ಬಾರಿ ಬೆಳೆದ ವಾಣಿಜ್ಯ ಬೆಳೆ ಶುಂಠಿಯ ಬೆಲೆಯೂ ಕುಸಿತವಾಗಿರುವುದು ಒಂದು ಕಡೆ ಇರಲಿ. ಇತ್ತ ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚು ರೈತಾಪಿ ವರ್ಗ ಬೆಳೆದಿರುವ ಅಲ್ಪ ಅವಧಿಯ ಹಾಗೂ ಕಡಿಮೆ ವೆಚ್ಚ ತಗಲುವ ಜೋಳದ ಫಸಲಿಗೆ ಈ ಬಾರಿ ಹಿಂದಿನ ವರ್ಷಗಳಿಗಿಂತಲೂ ಭಾರೀ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ.
ಆರ್ಥಿಕವಾಗಿ ಸಬಲರಾಗಿ ಇರುವ ಕೆಲ ರೈತರು ಹೆಚ್ಚು ವೆಚ್ಚ ತಗಲುವ ವಾಣಿಜ್ಯ ಬೆಳೆಗಳಿಗೆ ಮಾರು ಹೋಗುತ್ತಾರೆ. ಆದರೆ ಬಹುಪಾಲು ಬಡ ರೈತರು 110 ರಿಂದ 120 ದಿನಗಳಲ್ಲಿ ಕಟಾವಿಗೆ ಬರುವ ಜೋಳ ಬೆಳೆಯಲು ಮುಂದಾಗುತ್ತಾರೆ. ಈ ಜೋಳ ಬೆಳೆಯುವ ರೈತರಿಗೆ ಜೋಳವನ್ನು ಖರೀದಿಸುವ ಮಾರಾಟಗಾರರು ಜೋಳದ ಬಿತ್ತನೆ ಬೀಜ ಕೊಳ್ಳಲು ಹಾಗೂ ಭೂಮಿಯನ್ನು ಉಳುಮೆ ಮಾಡಲು ಮುಂಗಾರು ಅವಧಿಯಲ್ಲಿ ಮುಂಚಿತವಾಗಿಯೇ ಹಣ ಕೊಟ್ಟಿರುತ್ತಾರೆ. ಸಕಾಲಿಕವಾದ ಮಳೆಯ ಕಾರಣದಿಂದ ಈ ಬಾರಿಯ ಜೋಳದ ಬೆಳೆಯೇನೋ ಚೆನ್ನಾಗಿ ಬಂದಿತ್ತು.
ಆದರೆ ಬೆಲೆ ಮಾತ್ರ ರೈತನ ಜೀವ ಹಿಂಡುತ್ತಿದೆ. ಅಂದರೆ ಮಾಡಿದ ಕೈ ಸಾಲವನ್ನೇ ತೀರಿಸೋದೋ....? ಮನೆಗೆ ಉಪ್ಪು ಎಣ್ಣೆ ತಂದು ಉಣ್ಣೋದೋ? ಇಲ್ಲ ಮಕ್ಕಳನ್ನೇ ಓದಿಸೋದೋ...? ಏನು ಮಾಡೋದು ಎಂಬ ಚಿಂತೆಯಲ್ಲಿ ತಲೆ ಮೇಲೆ ಹೋದ ರೈತನ ಕೈ ಕೆಳಗಿಳಿಯುತ್ತಿಲ್ಲ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಅರೆ ನೀರಾವರಿ ಪ್ರದೇಶಗಳಲ್ಲಿ ನೂರಾರು ರೈತರು ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಬೆಳೆದಿರುವಂತಹ ಜೋಳದ ಬೆಳೆಗೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರಿಗೆ ನೆರವಾಗಬೇಕಿದೆ. ಆ ಕೆಲಸ ಅತೀ ತುರ್ತಾಗಿ ಆಗಬೇಕಿದೆ.
- ಕೆ.ಎಸ್. ಮೂರ್ತಿ