ದೇವಕಿ ಹಾಗೂ ವಸುದೇವನ ಮಗ ಶ್ರೀ ಕೃಷ್ಣ ಜನಿಸಿದ್ದು ದೇವಕಿಯ ಅಣ್ಣ ಕಂಸನ ಸೆರೆಮನೆಯಲ್ಲಾದರೂ ಬೆಳೆದದ್ದು ಗೋಕುಲದ ನಂದ-ಯಶೋದೆಯರ ಮಡಿಲಲ್ಲಿ. ತೊಟ್ಟಿಲ ಕಂದನಾಗಿರುವಾಗಲೇ ತನ್ನ ಲೀಲೆಯನ್ನು ತೋರಿಸಲು ಪ್ರಾರಂಭಿಸಿದನು. ಕಂಸನು ಕಳುಹಿಸಿದ ಒಂದೊಂದೇ ರಾಕ್ಷಸರನ್ನು ಯಾರ ಅರಿವಿಗೂ ಬಾರದಂತೆ ಸದೆಬಡಿದು ಜನರ ಮನದಲ್ಲಿ ಮೂಡಿದ ಅಸಂಖ್ಯ ಪ್ರಶ್ನೆಯನ್ನು ಚಾಣಾಕ್ಷತನದಿಂದ ನಿಭಾಯಿಸಿದವನು. ಸೀದಾ ಸಾದಾ ವ್ಯಕ್ತಿತ್ವದಿಂದ ಸಾಧಾರಣ ಗೊಲ್ಲರಂತೇ ಜೀವನ ನಡೆಸಿದವನು. ತಾನು ಜನ್ಮವೆತ್ತಿದ್ದು ದುಷ್ಟನಿಗ್ರಹಕ್ಕೆ ಶಿಷ್ಟರ ರಕ್ಷಣೆಗಾಗಿ ಎಂಬುದನ್ನು ಸಾಬೀತು ಪಡೆಸಿದವನು. ಸಾಮಾನ್ಯ ಮಾನವನಂತೆ ಜನ್ಮತಾಳಿ ಚಮತ್ಕಾರ ಮಾಡಿದವನು. ಭೂಮಿಯಲ್ಲಿ ಧರ್ಮ ಸಾಮ್ರಾಜ್ಯ ಸಂಸ್ಥಾಪನೆ ಮಾಡಬೇಕೆಂಬುದೇ ಆತನ ಬಹುದೊಡ್ಡ ಕನಸು. ಆ ಕನಸನ್ನು ನನಸು ಮಾಡಲು ಪಾಂಡವರೇ ಸಮರ್ಥರು ಎಂದು ಸರಿಯಾದ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ಅಂತೆಯೇ ಕೃಷ್ಣ ಮತ್ತು ಪಾಂಡವರ ಮೊದಲ ಭೇಟಿಯಾಗುವುದು ದ್ರೌಪದಿ ಸ್ವಯಂವರದಲ್ಲಿ. ಅಲ್ಲಿಂದ ಮುಂದೆ ಪಾಂಡವರಿಗೆ ಸಹಾಯ ಮಾಡುತ್ತಾ ತನ್ನ ಆಸೆ ಈಡೇರುವಂತೆ ಮಾಡುತ್ತಾನೆ.

ಪಾಂಡವರಿಗೆ ಶ್ರೀ ಕೃಷ್ಣನು ಸಂಬಂಧದಲ್ಲಿ ಭಾವನಾಗುತ್ತಾನೆ. ಪಾಂಡವರ ತಾಯಿ ಕುಂತಿದೇವಿ ಯದುರಾಜ ಶೂರಸೇನನ ಮಗ ವಸುದೇವ ಮತ್ತು ಕುಂತಿ ಅಣ್ಣ - ತಂಗಿ. ಹೀಗಾಗಿ ಕುಂತಿ ಆತನಿಗೆ ಅತ್ತೆ ಆಗಬೇಕು. ಶೂರಸೇನ ಕುಂತಿಯನ್ನು ಕುಂತಿಭೋಜನಿಗೆ ದತ್ತಕವಾಗಿ ಕೊಟ್ಟುಬಿಟ್ಟಿದ್ದ. ಕುಂತಿಭೋಜನ ಸಾಕು ಮಗಳಾಗಿ ಬೆಳೆದರೂ ತನ್ನ ರಕ್ತಸಂಬಂಧಿ ಯದುವಂಶದ ಕೊಂಡಿಯನ್ನು ಕಡಿದುಕೊಂಡಿರದೆ ಪಾಂಡವರಿಗೆ ಕೃಷ್ಣನ ಸಖ್ಯವನ್ನು ಸಿಗುವಂತೆ ಮಾಡುತ್ತಾಳೆ. ಕೃಷ್ಣನಿಗೆ ಪಾಂಡವರ ಮೇಲೆ ಒಲವಿದ್ದರೆ ಅಣ್ಣ ಬಲರಾಮನಿಗೆ ದುರ್ಯೋಧನನ ಮೇಲೆ ವಿಶೇಷ ಪ್ರೀತಿಯಿದ್ದಿತು. ತಂಗಿ ಸುಭದ್ರೆಯನ್ನು ದುರ್ಯೋಧನನಿಗೆ ಕೊಟ್ಟು ವಿವಾಹ ಮಾಡಲು ಇಚ್ಚಿಸಿ ತಯಾರಿ ನಡೆಸುತ್ತಿರುತ್ತಾನೆ. ಆದರೆ ಕೃಷ್ಣನಿಗೆ ಮತ್ಸರವುಳ್ಳ ಮನದ ದುರ್ಯೋಧನನಿಗೆ ಕೊಡಲು ಮನಸ್ಸಿರುವುದಿಲ್ಲ. ಅಲ್ಲದೆ ಸುಭದ್ರೆ ಅರ್ಜುನನನ್ನು ಪ್ರೀತಿಸುತ್ತಿದ್ದುದನ್ನು ಅರಿತು ತನ್ನ ತಂಗಿಗೆ ಸರಿಯಾದ ವ್ಯಕ್ತಿ ಈತನೇ ಎಂದು ಮದುವಣ ಗಿತ್ತಿಯಾದ ಸುಭದ್ರೆಯನ್ನು ಮದುವೆ ಮನೆಯಿಂದ ಅಪಹರಿಸಿ ವಿವಾಹ ಮಾಡಿಕೊಳ್ಳಲು ಅರ್ಜುನನಿಗೆ ಸಹಕರಿಸುತ್ತಾನೆ. ಬಹುಶಃ ಹೆಣ್ಣಿನ ಮನದ ಭಾವನೆಯನ್ನು ಅರಿತು ಆಕೆಗೆ ಸರಿಯಾದ ಬದುಕು ಸಿಗುವಂತೆ ಮಾಡಿದ ಮೊದಲ ವ್ಯಕ್ತಿ ಕೃಷ್ಣನೆಂದರೆ ತಪ್ಪಾಗದು.

ಪಾಂಡವರಿಗೆ ಬೆನ್ನೆಲುವಾಗಿ ನಿಂತು ಪ್ರತಿ ಹೆಜ್ಜೆಯಲ್ಲೂ ಸಲಹೆ ಕೊಡುತ್ತಾ ಮುಳ್ಳನ್ನು ಮುಳ್ಳಿನಿಂದ ತೆಗೆಯುವ ತಂತ್ರಗಾರಿಕೆಯಿಂದ ಕುರುಕ್ಷೇತ್ರ ಯುದ್ಧದಲ್ಲಿ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿ ಯಾಗುತ್ತಾನೆ. ವನವಾಸ ಅಜ್ಞಾತವಾಸ ಅನುಭವಿಸಿ ಬಂದ ಪಾಂಡವರಿಗೆ ಅವರ ರಾಜ್ಯವನ್ನು ಹಿಂದಿರುಗಿಸಲು ದುರ್ಯೋಧನ ಒಪ್ಪದಾಗ ಯುದ್ಧವೊಂದೇ ದಾರಿಯಾಗುತ್ತದೆ. ಶ್ರೀ ಕೃಷ್ಣನು ತನ್ನ ಸೈನ್ಯ ಬಲವನ್ನು ದುರ್ಯೋಧನನಿಗೆ ನೀಡಿ ತಾನು ಯುದ್ಧದಲ್ಲಿ ನೇರವಾಗಿ ಭಾಗವಹಿಸದೆ ಅರ್ಜುನನ ರಥ ನಡೆಸುವ ಸಾರಥಿಯಾಗುತ್ತಾನೆ. ರಣರಂಗದಲ್ಲಿ ಪ್ರೀತಿಯ ಪಿತಾಮಹ ಭೀಷ್ಮ, ಆಚಾರ್ಯ ದ್ರೋಣ ಹಾಗೂ ಇತರ ಬಂಧುಗಳೊಂದಿಗೆ ಯುದ್ಧ ಮಾಡಲು ನನ್ನಿಂದ ಸಾಧ್ಯವಿಲ್ಲ, ಇಲ್ಲಿ ನಡೆಯುವ ಅಪಾರ ಸಂಖ್ಯೆಯ ಯೋಧರ ಸಾವಿಗೆ ನಾನು ಕಾರಣನಾಗಲಾರೆನೆಂದು ಅರ್ಜುನನು ಧನಸ್ಸನ್ನು ಕೆಳಗಿಳಿಸಿ ಕುಸಿದು ಕುಳಿತುಕೊಳ್ಳುತ್ತಾನೆ. ಆಗ ಅರ್ಜುನನಿಗೆ ತನ್ನ ವಿರಾಟರೂಪ ದರ್ಶನವನ್ನು ನೀಡಿ ಧರ್ಮ ಸಾಮ್ರಾಜ್ಯ ಸಂಸ್ಥಾಪನೆಗೆ ಯುದ್ಧ ಅನಿವಾರ್ಯವೆಂದು ಬೋಧಿಸಿದ ಗೀತೆ ಭಗವದ್ಗೀತೆಯೆನಿಸಿ ಹಿಂದೂಗಳ ಪವಿತ್ರ ಗ್ರಂಥವೆನಿಸಿತು.

ಯುದ್ಧವನ್ನು ಗೆಲ್ಲಲು ಘಟಾನುಘಟಿಗಳಾದ ಭೀಷ್ಮ ಮತ್ತು ದ್ರೋಣರನ್ನು ಮೊದಲಿಗೆ ಯುದ್ಧ ರಂಗದಿಂದ ಸರಿಸಲು ಕೃಷ್ಣನು ತೀರ್ಮಾನಿಸುತ್ತಾನೆ. ಅಂತೆಯೇ ಭೀಷ್ಮರನ್ನು ಸೋಲಿಸಲು ಶಿಖಂಡಿಯನ್ನು ನಿಲ್ಲಿಸಿ ಅವರನ್ನು ಅರ್ಜುನ ಶರಶಯ್ಯೆಯಲ್ಲಿ ಮಲಗುವಂತೆ ಮಾಡುವನು. ಅಶ್ವತ್ಥಾಮವೆಂಬ ಆನೆಯು ಹತವಾಗಲು ಧರ್ಮರಾಯನಿಂದ ‘ಅಶ್ವತ್ಥಾಮೊ ಹತಃ ಕುಂಜರಃ’ವೆಂದು ಹೇಳಿಸಿ ದ್ರೋಣರಿಗೆ ಕುಂಜರವೆಂಬ ಶಬ್ದ ಕೇಳದಿರಲೆಂದು ಕೃಷ್ಣನು ಪಾಂಚಜನ್ಯ ಊದುತ್ತಾನೆ. ದ್ರೋಣರಿಗೆ ಅಶ್ವತ್ಥಾಮ ಹತ ಎಂಬ ಶಬ್ದ ಯಾವತ್ತೂ ಸತ್ಯಪಾಲನೆ ಮಾಡುತ್ತಿದ್ದ ಧರ್ಮರಾಯ ಹೇಳಿದ್ದು ನಿಜವಾಗಿರಬಹುದೆಂದು ತಮ್ಮ ಬಿಲ್ಲನ್ನು ಕೆಳಗಿಳಿಸಿ ಆ ಕೂಡಲೇ ಆತನಿದ್ದಲ್ಲಿಗೆ ಹೋಗಲು ಧ್ಯಾನಕ್ಕೆ ಕುಳಿತು ಯೋಗದಿಂದ ಆತ್ಮ ಬೇರ್ಪಡಿಸಿ ಮಗನನ್ನು ಕಾಣಲು ತೆರಳುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ದ್ರುಪದ ಪುತ್ರ ಧೃಷ್ಟದ್ಯುಮ್ನ ಅವರ ರುಂಡವನ್ನು ತುಂಡರಿಸುವನು. ಹೀಗೆ ದ್ರೋಣರು ಹತರಾಗಲು ಕೃಷ್ಣನೇ ಕಾರಣನಾಗುವನು. ಅಶ್ವತ್ಥಾಮನು ತಂದೆ ದ್ರೋಣರ ಸಾವಿಗೆ ಕಾರಣವಾದ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಲು ಯುದ್ಧ ರಂಗದಲ್ಲಿ ನಾರಾಯಣಾಸ್ತ್ರವನ್ನು ಪ್ರಯೋಗಿಸುವನು. ಆಗ ಕೃಷ್ಣನು ಪಾಂಡವರೆಲ್ಲರೂ ತಮ್ಮ ರಥದಿಂದ ಕೆಳಗಿಳಿದು ತಲೆಬಾಗಿ ಶರಣಾಗತಿಯಾಗುವಂತೆ ಮಾಡುವನು. ಆ ಅಸ್ತ್ರವನ್ನು ಶಮನಮಾಡಲು ಶರಣಾಗತಿಯೊಂದೇ ಮಾರ್ಗವಾಗಿತ್ತು. ಅಸ್ತ್ರವು ತನ್ನ ಪ್ರಭೆಯನ್ನು ಕಳೆದುಕೊಂಡು ಆಗಸದಲ್ಲಿ ಲೀನವಾಗಿ ಪಾಂಡವರ ಪ್ರಾಣವುಳಿಯುವುದು.

ಕೃಷ್ಣನು ಕರ್ಣನಿಗೆ ಆತನ ಜನ್ಮ ರಹಸ್ಯ ತಿಳಿಸಿ ಪಾಂಡವರ ಪಕ್ಷ ವಹಿಸಲು ತಿಳಿಸಿದಾಗ ಗೆಳೆಯನಿಗೆ ದ್ರೋಹ ಬಗೆಯಲು ನಿರಾಕರಿಸಿದಾಗ ತಾಯಿ ಕುಂತಿಯನ್ನೇ ಕಳುಹಿಸುತ್ತಾನೆ. ಆಕೆಯ ಮಾತನ್ನು ತಳ್ಳಿಹಾಕಿದಾಗ ತಮ್ಮಂದಿರ ಜೀವ ರಕ್ಷಣೆಯ ಹೊಣೆಯ ಭಾಷೆ ತೆಗೆದುಕೊಳ್ಳುವಂತೆ ಮಾಡುವನು. ಕರ್ಣನ ಬತ್ತಳಿಕೆಯಲ್ಲಿ ಸರ್ಪಾಸ್ತ್ರವೊಂದು ಅರ್ಜುನನ ಮೇಲೆ ಸೇಡಿನಿಂದ ಸೇರಿಕೊಂಡಿತ್ತು. ಅದನ್ನು ಕರ್ಣನು ಅರ್ಜುನನ ತಲೆಯ ಭಾಗಕ್ಕೆ ಗುರಿಯಿಟ್ಟಿರುತ್ತಾನೆ. ಸಾರಥಿಯಾಗಿದ್ದ ಶಲ್ಯನು ಎದೆಗೆ ಗುರಿಯಿಡಲು ಹೇಳಿದಾಗ ತಿರಸ್ಕರಿಸಿ ತೊಟ್ಟ ಗುರಿಯನ್ನು ಬದಲಿಸಲಾರೆನೆಂದು ಅರ್ಜುನನೆಡೆಗೆ ಬಾಣವನ್ನು ಬಿಡುತ್ತಾನೆ. ಆ ಕೂಡಲೇ ಕೃಷ್ಣನು ತನ್ನ ಕಾಲ ಹೆಬ್ಬೆರಳಿನಿಂದ ತಾನಿದ್ದ ರಥವನ್ನು ಅಮುಕುತ್ತಾನೆ ಬಾಣವು ಗುರುತಪ್ಪಿ ಅರ್ಜುನನ ಕಿರೀಟವನ್ನು ಬೀಳಿಸುವುದು. ಹೀಗೆ ಅರ್ಜುನನನ್ನು ರಕ್ಷಿಸುತ್ತಾನೆ. ಶಲ್ಯನು ಕರ್ಣನ ಮೇಲೆ ಸಿಟ್ಟಿನಿಂದ ನಿನ್ನ ಸಾರಥಿಯಾಗಲಾರೆನೆಂದು ರಥವಿಳಿದು ಹೋಗುತ್ತಾನೆ. ತಾನೇ ರಥವ ನಡೆಸುತ್ತಾ ಮುಂದುವರಿಯುತ್ತಿದ್ದ ಕರ್ಣನ ರಥದ ಚಕ್ರವು ನೆತ್ತರ ಕೆಸರಿನಲ್ಲಿ ಹೂತುಹೋದಾಗ ಅದನ್ನು ಎತ್ತುತ್ತಿರುವ ಕರ್ಣನೆಡೆ ಬಾಣಬಿಡಲು ಅರ್ಜುನನಿಗೆ ಹೇಳಿದಾಗ ನಿರಾಯುಧನೊಡನೆ ಹೋರಾಡುವುದು ಅಧರ್ಮವೆಂದು ನಿರಾಕರಿಸಿದ ಅರ್ಜುನನಿಗೆ ದ್ರೌಪದಿಯನ್ನು ಅಪಮಾನಿಸಿದವರಲ್ಲಿ ಕರ್ಣನ ಪಾಲೂ ಇದೆ. ನಿನ್ನ ಮಗ ಅಭಿಮನ್ಯುವನ್ನು ಹಿಂದಿನಿಂದ ಆಕ್ರಮಣ ಮಾಡಿದ್ದು ಅಧರ್ಮವಲ್ಲವೇ ಎಂದು ಹೇಳಿ ಮನಃಪರಿವರ್ತಿಸುವನು. ಮನದಲ್ಲಿ ಕರ್ಣನ ಬಗ್ಗೆ ಕೊರಗುತ್ತ ಪಾಂಡವರ ಗೆಲುವಿಗೆ ಇದು ಅನಿವಾರ್ಯವೆಂದು ಕರ್ಣನನ್ನು ಅರ್ಜುನ ಹತ್ಯೆಗೈಯುವಂತೆ ಮಾಡುವನು.

ಯುದ್ಧದಲ್ಲಿ ತನ್ನವರೆಲ್ಲವನ್ನು ಕಳೆದುಕೊಂಡ ದುರ್ಯೋಧನ ಹತಾಶನಾಗಿದ್ದಾಗ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರ ಸಲಹೆಯಂತೆ ತೀರ್ಥಯಾತ್ರೆಗೆ ಹೋಗಿದ್ದ ಬಲರಾಮ ಬರುವ ತನಕ ದ್ವೈಪಾಯನ ಸರೋವರದಲ್ಲಿ ಜಲಸ್ತಂಭನ ಮಂತ್ರವನ್ನು ಜಪಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾನೆ. ಇದನ್ನರಿತ ಪಾಂಡವರು ಕೃಷ್ಣನ ಸಮೇತ ದುರ್ಯೋಧನನಿದ್ದಲ್ಲಿಗೆ ಬಂದು ಆತನ ಬಲಹೀನ ಗುಣವಾದ ಕೋಪವನ್ನು ಭೀಮನಿಂದ ಕೆರಳುವಂತೆ ಮಾಡಿ ನೀರಿನಿಂದ ಮೇಲೆ ಬರುವಂತೆ ಮಾಡುವರು.

ಸಮಬಲರಾದ ಭೀಮ - ದುರ್ಯೋಧನರ ನಡುವೆ ಗದಾಯುದ್ಧ ನಡೆಯುತ್ತಿರುತ್ತದೆ. ಭೀಮನ ಪ್ರಹಾರವು ದುರ್ಯೋಧನನಿಗೆ ತಾಗುತ್ತಿರಲಿಲ್ಲ. ಏಕೆಂದರೆ ಗಾಂಧಾರಿಯು ಕಟ್ಟಿಕೊಂಡಿದ್ದ ತನ್ನ ಕಣ್ಣ ಪಟ್ಟಿ ಬಿಚ್ಚಿ ದಿವ್ಯದೃಷ್ಟಿಯಿಂದ ದುರ್ಯೋಧನನ ಬೆತ್ತಲೆ ದೇಹವನ್ನು ನೋಡಿ ವಜ್ರದೇಹ ಮಾಡಿದ್ದಳು. ಆದರೆ ಕೃಷ್ಣನು ಬೆತ್ತಲೆ ದೇಹದಿಂದ ತಾಯಿಯ ಅಣತಿಯಂತೆ ಸ್ನಾನ ಮಾಡಿ ಬರುತ್ತಿದ್ದ ದುರ್ಯೋಧನನನ್ನು ಅಣಕಿಸಿದಾಗ ತೊಡೆಯ ಭಾಗವನ್ನು ಅಲ್ಲೇ ಇದ್ದ ಬಾಳೆ ಎಲೆಯಿಂದ ಮುಚ್ಚಿರುತ್ತಾನೆ. ಹಾಗಾಗಿ ಆ ಭಾಗವು ಸೂಕ್ಷ್ಮವಾಗಿರುತ್ತದೆ. ಕೃಷ್ಣನು ತನ್ನ ತೊಡೆ ತಟ್ಟಿ ಸನ್ನೆ ಮಾಡುವನು. ಅಂತೆಯೇ ಭೀಮನು ಕೃಷ್ಣನ ಸನ್ನೆಯನ್ನರಿತು ಆತನ ತೊಡೆ ಮುರಿದು ದುರ್ಯೋಧನನ ಸಾವಿಗೆ ಕಾರಣನಾಗುತ್ತಾನೆ. ಹೀಗೆ ಯುದ್ಧದಲ್ಲಿ ಪಾಂಡವರಿಗೆ ಗೆಲುವನ್ನು ತಂದುಕೊಡುವಲ್ಲಿ ಕೃಷ್ಣನ ಪಾತ್ರ ಹಿರಿದಾಗಿದೆ.

ಯುದ್ಧದಲ್ಲಿ ಗೆಲುವನ್ನು ಪಡೆದುಕೊಂಡು ದೊಡ್ಡಪ್ಪ - ದೊಡ್ಡಮ್ಮನ ಆಶೀರ್ವಾದ ಪಡೆಯಲು ಪಾಂಡವರು ಅರಮನೆಗೆ ಬರುವರು. ದೃತರಾಷ್ಟ್ರ ಮನದಲ್ಲಿ ನೋವು ತುಂಬಿಕೊಂಡು ಒಬ್ಬೊಬ್ಬರನ್ನೇ ಆಶೀರ್ವದಿಸುವನು. ಏನೋ ನಿರ್ಧಾರ ಮಾಡಿದವನಂತೆ ಭೀಮನ ಸರದಿ ಬಂದಾಗ ನನ್ನನ್ನು ಅಪ್ಪಿಕೋ ಭೀಮ ಎಂದು ಬೇಡಿಕೆಯಿಟ್ಟಾಗ ಅಲ್ಲೇ ಇದ್ದ ಕೃಷ್ಣನು ಭೀಮನ ಆಕಾರದ ಲೋಹದ ಮೂರ್ತಿಯನ್ನು ಅಪ್ಪಿಕೊಳ್ಳುವಂತೆ ಮಾಡುವನು. ದೃತರಾಷ್ಟ್ರ ತನ್ನ ಪ್ರಿಯ ಪುತ್ರ ದುರ್ಯೋಧನನ ಸಾವಿಗೆ ಕಾರಣನಾದ ಭೀಮನ ಮೇಲಿನ ಸಿಟ್ಟೆಲ್ಲವೂ ಹೊರಹೊಮ್ಮಿ ಆ ವಿಗ್ರಹವು ಪುಡಿಪುಡಿಯಾಗುವುದು. ಭೀಮನ ಸಾವು ತಡೆಯುವಲ್ಲಿ ಕೃಷ್ಣನು ಯಶಸ್ವಿಯಾಗುವನು. ಹೀಗೆ ಶ್ರೀ ಕೃಷ್ಣನು ಪಾಂಡವರ ನೆರವಿಗೆ ನಿಂತು ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ.

- ಕುಕ್ಕುನೂರು ರೇಷ್ಮಾ ಮನೋಜ್, ಕುಶಾಲನಗರ.