ವೀರಾಜಪೇಟೆ, ಸೆ. 8: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಮಾತೆ ಮರಿಯ ಮ್ಮನವರ ಜನ್ಮದಿನಾಚರಣೆಯನ್ನು ಕ್ರೈಸ್ತ ಧರ್ಮಿಯರು ಶ್ರದ್ಧಾಭಕ್ತಿಯಿಂದ ಹೂವನ್ನು ಅರ್ಪಿಸುವ ಮೂಲಕ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದರು.

ಯೇಸು ಕ್ರಿಸ್ತರ ತಾಯಿ ಮರಿಯಮ್ಮನ ಹುಟ್ಟುಹಬ್ಬದ ಅಂಗವಾಗಿ ಕಳೆದ 9 ದಿನಗಳಿಂದ ಕ್ರೈಸ್ತ ಭಕ್ತಾದಿಗಳು ಪ್ರಾರ್ಥನೆಯನ್ನು ಸಲ್ಲಿಸಿ ನಂತರ ತಮ್ಮ ಮನೆಯ ಹೂದೋಟಗಳಿಂದ ತಂದ ಹೂಗ ಳನ್ನು ಮಾತೆ ಮರಿಯಮ್ಮನವರಿಗೆ ಅರ್ಪಿಸಿದರು. ಮಾತೆಗೆ ಮಡಿಸೀರೆ ಯನ್ನು ತೊಡಿಸಿ ಅಲಂಕಾರ ಮಾಡಲಾಗಿತ್ತು.

ಪ್ರಾರ್ಥನೆ ಸಂದರ್ಭ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಮದುಲೈ ಮುತ್ತು ಅವರು ಭಕ್ತಾದಿಗಳಿಗೆ ಹಿತವಚನ ಹೇಳಿದರು. ಪೂಜೆಯಲ್ಲಿ ಧರ್ಮಗುರು ಲಿಯೊನಾರ್ಡ್ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಆರ್ಜಿ ಗ್ರಾಮದಲ್ಲಿ ಆಚರಣೆ

ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿರುವ ಸಂತ ಅಂತೋಣಿ ಯವರ ದೇವಾಲಯದಲ್ಲಿ ಮಾತೆ ಮರಿಯಮ್ಮ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಚರ್ಚ್ ವ್ಯಾಪ್ತಿಗೆ ಒಳಪಡುವ ಆರ್ಜಿ, ಬೇಟೋಳಿ, ಪೆರಂಬಾಡಿ, ಚಿಟ್ಟಡೆ, ಹೆಗ್ಗಳ, ತೋರ, ನಿರ್ಮಲಗಿರಿ ಗ್ರಾಮಸ್ಥರು ಭಕ್ತಿಯಿಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ದೇವಾಲಯದ ಪ್ರಧಾನ ಗುರು ರೆ.ಫಾ. ರೋನಿ ರವಿಕುಮಾರ್ ಬಲಿ ಪೂಜೆಯನ್ನು ನೆರವೇರಿಸಿದರು. ಆ ಮೂಲಕ ಹಿಂದಿನ 9 ದಿನಗಳ ಕಾಲ ನಡೆದ ಪ್ರಾರ್ಥನೆಯಲ್ಲಿ ಮಾತೆಯ ಜಯಂತಿಯ ಮೂಲಕ ಹಬ್ಬವು ಕೊನೆಗೊಂಡಿತು.

ಜನರು ಸಾಮಾಜಿಕ ಅಂತರದೊಂದಿಗೆ ಬಲಿಪೂಜೆಯಲ್ಲಿ ಪಾಲ್ಗೊಂಡರು ಧರ್ಮಗುರುಗಳು ಭೋದನೆಯ ಮೂಲಕ ಹಬ್ಬದ ಸಂದೇಶವನ್ನು ನೀಡಿದರು. ಭಕ್ತಾದಿಗಳಿಗೆ ಸಿಹಿ ವಿತರಿಸಲಾಯಿತು.

ಸುಂಟಿಕೊಪ್ಪ : ಯೇಸುಕ್ರಿಸ್ತರ ತಾಯಿ ಕ್ಯಾಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವ ವನ್ನು ಇಲ್ಲಿನ ಸಂತ ಮೇರಿ ಶಾಲಾ ಆವರಣದಲ್ಲಿ ಸರಳ ರೀತಿಯಲ್ಲಿ ಸಾಮಾಜಿಕ ಅಂತರದೊಂದಿಗೆ ದಿವ್ಯ ಬಲಿಪೂಜೆಯೊಂದಿಗೆ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉತ್ಸವ ಅಂಗವಾಗಿ ಸಂತ ಅಂತೋಣಿ ದೇವಾಲಯದ ಧರ್ಮಗುರು ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಧರ್ಮಗುರು ಮದಲೈ ಮುತ್ತು ಅವರು ಸರಳ ದಿವ್ಯ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ, ನೂತನ ತೆನೆಗಳನ್ನು ಆಶೀರ್ವಚಿಸಿ ವಿತರಿಸಿದರು.

ಕ್ರೈಸ್ತ ಬಾಂಧವರು ಮನೆ ಮನೆಗಳಿಂದ ಒಗ್ಗೂಡಿಸಿ ತಂದಿದ್ದ ಬಗೆಬಗೆಯ ಪುಷ್ಪಗಳನ್ನು ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾತೆ ಮರಿಯಮ್ಮನವರಿಗೆ ಸಮರ್ಪಿಸುವ ಮೂಲಕ ಪ್ರಾರ್ಥಿಸಿದರು.