ಕೂಡಿಗೆ, ಸೆ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ರೈತ ಸಮಿತಿಯ ಸಭೆಯು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಪಿ.ಎಂ. ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಹಾರಂಗಿ ಜಲಾಶಯದ ಎಡಭಾಗದ ಹಾರಂಗಿ ನದಿ ಅಂಚಿನಿಂದ ಕೂಡಿಗೆ ಸೈನಿಕ ಶಾಲೆ ತಡೆಗೋಡೆಯವರೆಗೆ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ವಿದ್ಯುತ್ ಅಳವಡಿಸುವಂತೆ ಒತ್ತಾಯ ಮಾಡುವುದು ಮತ್ತು ಇಲ್ಲಿನ ಪಶುಪಾಲನಾ ಇಲಾಖೆಯ ಪಶುವೈದ್ಯ ಕೇಂದ್ರಕ್ಕೆ ಡಿ ದರ್ಜೆಯ ನೌಕರರನ್ನು ಮತ್ತು ಖಾಯಂ ಪಶು ವೀಕ್ಷಕರನ್ನು ತಕ್ಷಣ ನೇಮಕ ಮಾಡುವಂತೆ ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಹಾರಂಗಿ ಮುಖ್ಯ ನಾಲೆಯ ದಂಡೆಯಲ್ಲಿ ಬೃಹತ್ ಗಾತ್ರದ ಮರಗಳು ಬೆಳೆದು ನಿಂತಿದ್ದು, ಹಾರಂಗಿ ನೀರಾವರಿ ಇಲಾಖೆ ಅರಣ್ಯ ಇಲಾಖೆ ಜೊತೆಗೆ ಪತ್ರವ್ಯವಹಾರ ನಡೆಸಿ ಅವುಗಳ ತೆರವಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.
ಈ ಸಂದರ್ಭ ರೈತ ಸಮಿತಿಯ ಅಧ್ಯಕ್ಷ ಪಿ.ಎಂ. ಚಿಣ್ಣಪ್ಪ, ಉಪಾಧ್ಯಕ್ಷ ನಾಣಯ್ಯ, ಖಂಜಾಚಿ ಕಾಳಪ್ಪ, ರೈತ ಸಲಹಾ ಸಮಿತಿಯ ಸದಸ್ಯರಾದ ಐ.ಎಸ್. ಗಣೇಶ್, ಟಿ.ಎಂ. ಚಾಮಿ, ಎನ್.ಎಸ್. ಮುತ್ತಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.