ಕಣಿವೆ, ಸೆ. 8: ರಾಷ್ಟ್ರೀಯ ಹೆದ್ದಾರಿ 275 ರ ಅಂಚಿನಲ್ಲಿ ಇರುವ ಆನೆಕಾಡು ಅರಣ್ಯದೊಳಗಿನ ಸಾಕಾನೆಗಳ ಸಲಹುವ ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ಮೂಲಸೌಕರ್ಯಗಳಿಂದ ವಂಚಿತಗೊಂಡು ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ. ಇವರ ಕಷ್ಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಂದನ ದೊರೆತಿಲ್ಲ.

ಸರ್ಕಾರವನ್ನು ಮುನ್ನಡೆಸುವ ಓರ್ವ ಮುಖ್ಯಮಂತ್ರಿಯಾಗಲೀ, ಓರ್ವ ಐಎಎಸ್ ಅಧಿಕಾರಿಯಾಗಲೀ ಅಥವಾ ಬೇರಾವುದೇ ರಾಜಕಾರಣಿ, ಉದ್ಯಮಿ ಹಾಗೂ ಆಗರ್ಭ ಶ್ರೀಮಂತ ಯಾರೂ ಕೂಡ ಓರ್ವ ಆನೆ ಮಾವುತನಿಗೆ ಸಮರಲ್ಲ. ಅಂದರೆ ಯಾರಿಂದಲೂ ಮಾಡಲಾಗದ ಅಸಾಮಾನ್ಯವಾದ ಸಾಕಾನೆ ಸಲಹುವ ಕಾಯಕ ಓರ್ವ ಮಾವುತನಿಂದ ಮಾತ್ರ ಸಾಧ್ಯ. ಅಂತಹ ಮಾವುತನನ್ನು ಒಂದು ಸರ್ಕಾರ ಅಥವಾ ಜಿಲ್ಲಾಡಳಿತ ಹೀನಾಯವಾಗಿ ನಡೆಸಿಕೊಳ್ಳುವ ರೀತಿ ಇದೆಯಲ್ಲ ಅದು ಸಹಿಸಲಾಗದು. ವಿಶ್ವಮನ್ನಣೆ ಗಳಿಸಿರುವ ಮೈಸೂರು ದಸರಾ ವೈಭವದ ಆಚರಣೆಗೆ ಸಾಕಾನೆಗಳ ಪಾತ್ರ ಅಪಾರವಾದುದು. ಆ ಆನೆಗಳು ವೈಭವದ ದಸರಾ ಮೆರವಣಿಗೆಯಲ್ಲಿ ಲಯ ತಪ್ಪದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವಲ್ಲಿ ಅವುಗಳಿಗೆ ಅಷ್ಟೇ ಗಂಭೀರದ ನಡಿಗೆಯನ್ನು ಹೇಳಿಕೊಡುವ ಅಂದರೆ ಅವನದೇ ಆದ ಪರಿಭಾಷೆಯಲ್ಲಿ ಹೇಳಿದಂತೆ ನಡೆದುಕೊಳ್ಳುವ ಈ ಮಾವುತನಿಗೆ ಅದ್ಯಾವ ವಿಶ್ವವಿದ್ಯಾಲಯ ಆ ಶಿಕ್ಷಣ ಕಲಿಸಿತ್ತು ಹೇಳಿ? ಆನೆ - ಮಾವುತರ ಸಂಭಾಷಣೆಯ ಪರಿಭಾಷೆಯನ್ನು ಕಲಿಸಿದ ಗುರು ಅಂತಾ ಇದ್ದರೆ ಕೇವಲ ಮಾವುತ ಮಾತ್ರ. ಯಾವ ಅಧಿಕಾರಿಯೂ ಅಲ್ಲ.

ಆನೆಕಾಡು ಸಾಕಾನೆ ಶಿಬಿರದಲ್ಲಿ ಹತ್ತಕ್ಕೂ ಹೆಚ್ಚು ಆನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ಕಳೆದ ಹಲವಾರು ದಶಕಗಳಿಂದಲೂ ಇವೆ. ಆದರೆ ಇದೀಗ ಹಾಡಿಗೆ ತೆರಳಿ ನೋಡಿದವರಿಗೆ ನಿಜಕ್ಕೂ ಈ ಆನೆ ನಿರ್ವಹಣೆ ಮಾಡುವ ಕುಟುಂಬಗಳ ಕರುಣಾಜನಕ ಸ್ಥಿತಿ ಮರುಕ ಹುಟ್ಟಿಸುತ್ತದೆ. ಮಾತ್ರವಲ್ಲ ವ್ಯವಸ್ಥೆಯ ಮೇಲೆ ಆಕ್ರೋಶ ಭರಿಸುತ್ತದೆ. ಈ ಶಿಬಿರದಲ್ಲಿರುವ ಕುಟುಂಬಗಳು ವಾಸಿಸಲು ಒಂದು ಸುವ್ಯವಸ್ಥಿತ ಮನೆಗಳಿಲ್ಲದೇ ಪರಿತಪಿಸುತ್ತಿವೆ. ಅಂದರೆ ಗಾಳಿ ಬಂದರೆ ಸಾಕು ಹಾರಿ ಹೋಗುವಂತಹ ಶಿಥಿಲಾವಸ್ಥೆಯ ಗುಡಿಸಲುಗಳ ಮೇಲೆ ಪ್ಲಾಸ್ಟಿಕ್ ಹೊದ್ದು ವಾಸಿಸುತ್ತಿವೆ.

ಕಳೆದ 35 ವರ್ಷಗಳ ಹಿಂದೆ ಶಿಬಿರದಲ್ಲಿ ಅಳವಡಿಸಿದ್ದ ಕೈನಲ್ಲಿ ಒತ್ತಿ ನೀರೆತ್ತುವ ಕೊಳವೆ ಬಾವಿ ಹಾನಿಯಾಗಿ ತಿಂಗಳುಗಳೇ ಕಳೆದಿದ್ದು ಕುಡಿಯುವ ನೀರಿಗೆ ಈ ಜನ ಪರದಾಡುತ್ತಿದ್ದಾರೆ. ಶಿಬಿರದಲ್ಲೇ ಇರುವ ಅರಣ್ಯ ರಕ್ಷಕರ ವಸತಿಗೃಹಕ್ಕೆ ಅಳವಡಿಸಿರುವ ಕುಡಿಯುವ ನೀರನ್ನು ಕೆಲವೊಮ್ಮೆ ಪಡೆಯುವ ಈ ಕುಟುಂಬಗಳು ವಿದ್ಯುತ್ ಸರಬರಾಜು ಇಲ್ಲದೇ ಹೋದರಂತು ನೀರಿಗಾಗಿ ಕಿಲೋ ಮೀಟರ್ ದೂರದಲ್ಲಿರುವ ಅರಣ್ಯದೊಳಗಿನ ಕಾಡಾನೆಗಳ ಕೆರೆಯೊಂದಕ್ಕೆ ತೆರಳಿ ಕುಡಿಯುವ ನೀರು ಹೊತ್ತು ತರುವ ದಯನೀಯ ಸ್ಥಿತಿಯಲ್ಲಿ ದಿನಗಳೆಯುತ್ತಿದ್ದಾರೆ. ಇನ್ನು ಈ ಕುಟುಂಬಗಳಿಗೆ ವಿದ್ಯುತ್ ಎಂಬುದು ಮರೀಚಿಕೆಯಾಗಿದೆ. ಅಂದರೆ ಇದೂವರೆಗೂ ಈ ನಿವಾಸಿಗಳು ವಾಸವಿರುವ ಗುಡಿಸಲುಗಳಿಗೆ ವಿದ್ಯುತ್ ಕಲ್ಪಿಸಿಯೇ ಇಲ್ಲ. ಇಲ್ಲಿನ ಕೆಲವು ಮಂದಿ ಮೊಬೈಲ್ ಹೊಂದಿದ್ದು ಅಲ್ಲೇ ಇರುವ ಅರಣ್ಯ ರಕ್ಷಕರ ವಸತಿ ಗೃಹದಲ್ಲಿ ಆ ಮೊಬೈಲ್‍ಗಳನ್ನು ಚಾರ್ಜ್ ಮಾಡಿಕೊಳ್ಳುವುದಾಗಿ ಇಲ್ಲಿನ ನಿವಾಸಿ ಅಶೋಕ ಹೇಳುತ್ತಾರೆ. ಇಲ್ಲಿನ ಶಾಲೆಗೆ ಹೋಗುವ ಮಕ್ಕಳು ಅರಣ್ಯರಕ್ಷಕರ ವಸತಿ ಗೃಹದ ಬಳಿ ಇರುವ ವಿದ್ಯುತ್ ಬೆಳಕಿನಲ್ಲಿ ರಾತ್ರಿಯ ಕೆಲ ಸಮಯ ಓದುತ್ತಾರೆ. ಸಾಕಾನೆಗಳನ್ನು ಕಟ್ಟಿ ಸಾಕುವ ಇಲ್ಲಿ ಅನೇಕ ಬಾರಿ ಕಾಡಾನೆಗಳು ಈ ಶಿಬಿರಕ್ಕೆ ಅತಿಥಿಗಳಂತೆ ಬಂದು ಹೋಗುವ ಪರಿಪಾಠವೂ ಇದೆಯಂತೆ. ಇನ್ನು ಇದೇ ಸಾಕಾನೆ ಶಿಬಿರದಲ್ಲಿ ಇರುವ ವಿಜಯ, ಹರ್ಷ ಹಾಗೂ ವಿಕ್ರಮ ಎಂಬ ಸಾಕಾನೆಗಳಿಗೆ ರಾಗಿ ಹಾಗೂ ಹುರುಳಿ ಕಾಳು ಬೇಯಿಸುವ ಪಾತ್ರೆಯೊಂದು ಅತೀ ಚಿಕ್ಕದಾಗಿದ್ದು, ಅದನ್ನು ಕಳೆದ ಹತ್ತಾರು ವರ್ಷಗಳಿಂದ ಬಳಸಲಾಗುತ್ತಿದೆ. ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬ ನಾಣ್ಣುಡಿಯಂತೆ ಇಲ್ಲಿರುವ ತೀರಾ ಕಿರಿದಾದ ಪಾತ್ರೆಯಲ್ಲಿ ಆಗಷ್ಟೇ ಜನಿಸಿದ ಆನೆಮರಿಗೂ ಬೇಯಿಸಲು ಸಾಲದೆಂಬಂತಿದೆ. ಹೀಗಿದ್ದರೂ ಕೂಡ ಅರಣ್ಯ ಅಧಿಕಾರಿಗಳು ದೊಡ್ಡದಾದ ಹಿಟ್ಟು ಬೇಯಿಸುವ ಪಾತ್ರೆ ಖರೀದಿಸಿ ಕೊಡದಷ್ಟು ಬಡತನದಲ್ಲಿ ಇಲಾಖೆಯನ್ನು ನಡೆಸುತ್ತಿದ್ದಾರೆ. ಇಲ್ಲಿ ಅರಣ್ಯ ಇಲಾಖೆಯ ಸಾಕಾನೆಗಳ ಸೇವೆಗೆಂದೇ ಇರುವ ಗಿರಿಜನರನ್ನು ಅರಣ್ಯ ಇಲಾಖೆ ಇನ್ನಾದರೂ ಮನುಷ್ಯರಂತೆ ನೋಡಬೇಕಿದೆ. ಕೂಡಲೇ ಈ ಸಾಕಾನೆಗಳ ಮಾವುತ ಪರಿವಾರದವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕಿದೆ. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಗಿರಿಜನರ ಸ್ಥಿತಿಗತಿ ವಿಚಾರಿಸಿದ ಗಿರಿಜನ ಮುಖಂಡರೂ ಆದ ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಪತ್ರಿಕೆಯೊಂದಿಗೆ ಮಾತನಾಡಿ, ಅರಣ್ಯ ಇಲಾಖೆ ನಮ್ಮ ಗಿರಿಜನ ಕುಟುಂಬಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಈ ಮಂದಿಗೆ ಕೂಡಲೇ ಕುಡಿಯುವ ಶುದ್ಧ ನೀರು, ವಿದ್ಯುತ್ ಸೌಲಭ್ಯ ಒದಗಿಸಬೇಕು. ಅಲ್ಲದೇ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಈ ಶಿಬಿರಕ್ಕೆ ಭೇಟಿ ನೀಡಿ ಈ ಮಾವುತ ಕಾವಾಡಿಗಳಿಗೆ ಮನೆಗಳನ್ನು ಕಟ್ಟಿ ಕೊಡಬೇಕು ಎಂದರು.

ಕೊನೆಯ ಪಕ್ಷ ಸಾಕಾನೆಗಳ ಸಲಹುವ ಸಕಲ ಪರಿವಾರಕ್ಕೆ ಅವರು ಇರುವೆಡೆಯ ಹಾಡಿಗಳಲ್ಲಿ ಒಳ್ಳೆಯ ಮನೆ, ನೀರು, ವಿದ್ಯುತ್ ರಸ್ತೆ ಮಾಡಿಕೊಡುವಂತಾಗಬೇಕೆಂದು ಗಿರಿಜನ ಮುಖಂಡ ಚಂದ್ರು ಆಗ್ರಹಿಸಿದ್ದಾರೆ.

- ಕೆ.ಎಸ್. ಮೂರ್ತಿ.