ಕೂಡಿಗೆ, ಸೆ. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ವಿವಿಧ ಸಂಘಟನೆಗಳಾದ ರೈತ ಸಮಿತಿ ಯುವಕ ಸಂಘ. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿದ್ದರು. ಸೋಮವಾರಪೇಟೆ ಮುಖ್ಯ ರಸ್ತೆ ಬದಿಯಲ್ಲಿ ಮತ್ತು ಹುದುಗೂರು ಗ್ರಾಮದ ಒಳಭಾಗದಲ್ಲಿ ಎರಡು ಕಿಲೋಮೀಟರ್‍ವರೆಗೆ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ನಡೆಸಿದರು.

ಸೋಮವಾರಪೇಟೆ ಮುಖ್ಯ ರಸ್ತೆಯಲ್ಲಿ ಹಾರಂಗಿಗೆ ತೆರಳುವ ಪ್ರವಾಸಿಗರು ಪಾಸ್ಟಿಕ್ ಬಾಟಲಿ ಸೇರಿದಂತೆ ಅನೇಕ ವಸ್ತುಗಳನ್ನು ರಸ್ತೆಯ ಬದಿಯಲ್ಲಿ ಎಸೆದಿದ್ದರು. ಇದನ್ನು ಮನಗಂಡ ಗ್ರಾಮದ ವಿವಿಧ ಸಂಘಟನೆಯ ಪದಾಧಿಕಾರಿಗಳು ಗ್ರಾಮದಲ್ಲಿ ಸಭೆ ಮಾಡಿ ಒಂದು ದಿನದ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಂಡರು. ಎರಡು ಟ್ರಾಕ್ಟರ್‍ನಷ್ಟು ಕಸವನ್ನು ತೆಗೆದು ಕಸದ ಗುಂಡಿ ಇರುವ ಪ್ರದೇಶವಾದ ಭುವನಗಿರಿಗೆ ಸಾಗಿಸಲಾಯಿತು.

ಈ ಸಂದರ್ಭ ಹಾರಂಗಿ ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್, ರೈತ ಸಮಿತಿಯ ಅಧ್ಯಕ್ಷ ಟಿ.ಎಂ. ಚಿಣ್ಣಪ್ಪ, ಉಮಾಮಹೇಶ್ವರ ದೇವಾಲಯ ಸಮಿತಿಯ ಉಪಾಧ್ಯಕ್ಷ ಎನ್.ಎಂ. ಮುತ್ತಪ್ಪ, ಸಮಿತಿಯ ಪ್ರಮುಖರಾದ ನಾಣಯ್ಯ, ಶಿವಪ್ಪ, ನಾಗರಾಜು ಸೇರಿದಂತೆ ಯುವಕ ಸಂಘದ ಪದಾಧಿಕಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.