ಮಡಿಕೇರಿ, ಸೆ. 7: ನಗರದ ಮಂಗಳೂರು ರಸ್ತೆ ತಿರುವಿನಲ್ಲಿ ವಾಹನ ಮಾಲೀಕನೊಬ್ಬ ತನ್ನ ವಾಹನವನ್ನು ರಸ್ತೆ ತಿರುವಿನಲ್ಲಿ ಹೆದ್ದಾರಿಯ ಸಂಚಾರಕ್ಕೆ ಅಡ್ಡಿಪಡಿಸಿ ನಿಲ್ಲಿಸಿದ್ದಲ್ಲದೆ, ಮಡದಿಯನ್ನು ವಾಹನದಲ್ಲಿ ಕುಳ್ಳಿರಿಸಿ ಕಿಲುಕೈ ಸಮೇತ ತೆರಳಿದ್ದಾನೆ.ಈ ವೇಳೆ ನಗರದಿಂದ ಮಂಗಳೂರಿನತ್ತ ಹೊರಟ ರಾಜ ಹಂಸ ಬಸ್ ಹಾಗೂ ಆ ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ರಾಜ್ಯ ಸಾರಿಗೆ ಬಸ್ ಮುಖಾಮುಖಿಯೊಂದಿಗೆ ಇತರ ಅನೇಕ ವಾಹನಗಳು ದಾರಿಯಿಲ್ಲದೆ ಸಾಲುಗಟ್ಟಿ ನಿಲ್ಲುವಂತಾಯಿತು. ಪ್ರಯಾಣಿಕರ ಸಹಿತ ಸಾರ್ವಜನಿಕರು ಹೆದ್ದಾರಿಯ ನಡುವೆ ಸಾಕಷ್ಟು ಹೊತ್ತು ಹೆಣಗಾಡಬೇಕಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡ ವಾಹನದ ಕಿಲು ಇಲ್ಲದ್ದರಿಂದ ಅಸಹಾಯಕರಾಗಿ ಕಾಯಬೇಕಾಯಿತು. ಪರಿಸ್ಥಿತಿಯಿಂದ ವಾಹನದೊಳಗೆ ಒಂಟಿಯಾಗಿದ್ದ ಮಹಿಳೆ ಮುಜುಗರದೊಂದಿಗೆ ಚಡಪಡಿಸುತ್ತಿದ್ದರೆ, ಅದೇನೋ ‘ಪಾರ್ಸಲ್’ ತರಲು ಹೊರಟಿದ್ದ ವ್ಯಕ್ತಿಗೆ ಮಾತ್ರ ಇತರರು ಹಿಡಿಶಾಪ ಹಾಕುತ್ತಿದ್ದ ದೃಶ್ಯ ಎದುರಾಯಿತು.