ನಾಪೆÇೀಕ್ಲು, ಸೆ. 6: ವೀರಾಜಪೇಟೆಯಲ್ಲಿ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್‍ನ ಸದಸ್ಯರಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಸ್ಥೆಯ ವತಿಯಿಂದ ಸರಸು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸರಸು ಅವರು ಕೊಡಗಿನ ಸಾಂಪ್ರದಾಯಿಕ ಅಡುಗೆ ಶೈಲಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ವಿಶ್ವವಿಖ್ಯಾತ ಪಾಕಶಾಸ್ತ್ರಜ್ಞ ಗಾರ್ಡನ್ ರಾಮ್ಸ್ಸಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಸರಸು ಅವರು ಕೊಡಗಿನ ಸಾಂಪ್ರದಾಯಿಕ ಅಡುಗೆಯನ್ನು ಮಾಡಿ ತೋರಿಸಿದ್ದರು. ಈ ಅಡುಗೆ ತಯಾರಿ ‘ನ್ಯಾಷನಲ್ ಜಿಯೋಗ್ರಫಿ’ಯಲ್ಲಿ ಪ್ರಸಾರವಾಗುವುದರೊಂದಿಗೆ ಇವರ ಕೀರ್ತಿ ವಿಶ್ವಮಟ್ಟದಲ್ಲಿ ಪಸರಿಸಿದೆ. ಇವರ ಸಾಧನೆ ಶ್ಲಾಘಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಬಾರ್ಡ್ ಸಂಸ್ಥೆಯ ಜಿಲ್ಲಾ ಮಹಾ ಪ್ರಬಂಧಕ ಶ್ರೀನಿವಾಸ್ ನಬಾರ್ಡ್ ಸಂಸ್ಥೆಯು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಒಗ್ಗಟ್ಟು, ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಕೊಡಗಿನ ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಪೂರಕವಾದ ತರಬೇತಿ, ಧನ ಸಹಾಯ, ಸಹಕಾರವನ್ನು ನಬಾರ್ಡ್ ಸಂಸ್ಥೆ ನೀಡಲು ಸಿದ್ಧವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ-ಮಡಿಕೇರಿ ತಾಲೂಕು ಸಾವಯವ ಕೃಷಿ ಸಂಘದ ಅಧ್ಯಕ್ಷ ಬಲ್ಟಿಕಾರಂಡ ಮುದ್ದಣ್ಣ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ತಾವು ತಯಾರಿಸುವ ವಸ್ತುಗಳ ಗುಣಮಟ್ಟ ಕಾಯ್ದುಕೊಂಡು ಒಗ್ಗಟ್ಟಿನಿಂದ ಮುನ್ನಡೆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್‍ನ ಅಧ್ಯಕ್ಷೆ ಕೇಟೋಳಿರ ಫ್ಯಾನ್ಸಿ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ತಂತ್ರಜ್ಞಾನ ಅಗತ್ಯ. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಸದಾ ಸಿದ್ಧವಿದೆ. ಎಲ್ಲರೂ ತಂತ್ರಜ್ಞಾನಕ್ಕೆ ಮೊದಲ ಆದÀ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ನಬಾರ್ಡ್ ಸಂಸ್ಥೆಯ ಮಾಜಿ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ, ಕ್ಯಾಟ್ ಕೊಡಗು ಸಂಸ್ಥೆಯ ಚೇನಂಡ ಮಾಚಯ್ಯ, ನಾಚಪ್ಪ, ವಿಲಾಸ್, ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಬೆಂಗಳೂರು ಹಿತಾ ಸಂಸ್ಥೆಯ ಜಯಪ್ರಕಾಶ್ ನಾಗತಿಹಳ್ಳಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಹನಾ ಹೆಗ್ಡೆ ಇದ್ದರು.