ಕಣಿವೆ, ಸೆ. 6: ಪ್ರತಿ ವರ್ಷದ ಮಳೆಗಾಲದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವ ರೀತಿ ನಿಜಕ್ಕೂ ಶೋಚನೀಯವಾದುದು. ತಮ್ಮ ಜಮೀನುಗಳಲ್ಲಿ ಬೆಳೆಗಳ ನಡುವೆ ಇರುವ ಬೃಹತ್ ಮರಗಳ ರೆಂಬೆಗಳನ್ನು ಜೋಡಿಸಿ ಅದರ ಮೇಲೆ ಗುಡಿಸಲು ನಿರ್ಮಿಸಿ ರಾತ್ರಿ ವೇಳೆ ನಿದ್ರೆ ಬಿಟ್ಟು ಎಚ್ಚರದಿಂದ ಕಾಡಾನೆಗಳನ್ನು ಕಾಯುವ ಕೆಲಸ ಇಲ್ಲಿನ ರೈತರ ನಿತ್ಯದ ಕಾಯಕವಾಗಿದೆ. ಏಲಕ್ಕನೂರು, ಹೊಸಳ್ಳಿ, ಸೀಗೆಹೊಸೂರು, ಹುದುಗೂರು, ಯಡವನಾಡು ಮೊದಲಾದ ಗ್ರಾಮಗಳ ರೈತರು ಮಳೆಗಾಲದಲ್ಲಿ ಬೆಳೆದ ಪ್ರಮುಖ ಬೆಳೆ ಜೋಳದ ಫಸಲನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ವರೆಗೂ ರಾತ್ರಿ ವೇಳೆ ನಿತ್ಯವೂ ದೀಪಾವಳಿ ಆಚರಣೆಯಾಗುತ್ತದೆ.
ಅಂದರೆ ರಾತ್ರಿ ವೇಳೆ ಕಾಡಾನೆಗಳ ಹಿಂಡು ಕಾಡಿನಿಂದ ರೈತರ ಬೆಳೆಯೊಳಗೆ ಧಾವಿಸುವುದನ್ನು ಅರಿತು ಅವುಗಳತ್ತ ಪಟಾಕಿಯನ್ನು ಹಚ್ಚಿ ಸದ್ದು ಮಾಡುವ ಮೂಲಕ ನಿತ್ಯವೂ ರಾತ್ರಿ ಕಾವಲಿನ ಕಾಯಕ ಇರುತ್ತದೆ. ಸುತ್ತಲೂ ಇರುವ ಆನೆಕಾಡು, ಯಡವನಾಡು, ಅತ್ತೂರು, ಹುದುಗೂರು ಅರಣ್ಯಗಳ ನಡುವೆ ಇರುವ ಈ ಗ್ರಾಮಗಳ ರೈತರಿಗೆ ಸರಿಯಾದ ಬೆಳೆ ಹಾಗೂ ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆಯ ಯೋಜನೆಗಿಂತ ಕಾಡಾನೆಗಳು ಧಾಳಿ ಮಾಡಿ ಒಮ್ಮೆಲೆ
(ಮೊದಲ ಪುಟದಿಂದ) ಬೆಳೆಯನ್ನು ಹಾಳು ಮಾಡುವ ಯೋಚನೆಯೇ ಆವರಿಸಿರುತ್ತದೆ. ಹೀಗಾಗಿ ಕಾಡಂಚಿನ ಈ ಗ್ರಾಮಗಳಲ್ಲಿ ಮನೆಗೊಬ್ಬರು ಹೊಲ ತೋಟಗಳಲ್ಲಿ ರಾತ್ರಿ ಬಿಡಾರ ಹೂಡುತ್ತಾರೆ.
ಹಗಲಿಡೀ ಜಮೀನಿನಲ್ಲಿ ಕೆಲಸ ಮಾಡಿ ಬಳಲಿದ ಜೀವ ಏನಾದರೂ ಆಯಾಸಗೊಂಡು ಅರೆಕ್ಷಣ ಮಲಗಿದರೆ ವರ್ಷ ಪೂರ ಈ ರೈತರು ಸಂಕಟಪಡಬೇಕಾಗುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಕಾಡಾನೆಗಳ ಹಿಂಡು ಬೆಳೆಯನ್ನು ಒಂದೇ ಸರಿ ನುಗ್ಗಿ ತುಳಿದು ತಿಂದು ನೆಲಸಮಗೊಳಿಸುತ್ತವೆ. ಈ ಹಿಂದೆ ಕಾಡಾಗಿಯೇ ಇದ್ದ ಜಾಗದಲ್ಲಿ ನಾವುಗಳು ಮನೆಗಳನ್ನು ಕಟ್ಟಿ ಕೊಂಡು ಹೊಲ ಗದ್ದೆ ತೋಟಗಳನ್ನು ಮಾಡಿಕೊಂಡ ಪರಿಣಾಮವೇ ಕಾಡಾನೆಗಳು ಇಂದು ತಮ್ಮ ಜೀವನೋಪಾಯಕ್ಕಾಗಿ ತ್ರಾಸಪಡುತ್ತಿವೆ. ಕಾಡಾನೆಗಳು ನಮ್ಮ ಜಾಗಕ್ಕೆ ಬಂದಿಲ್ಲ. ಬರುತ್ತಿಲ್ಲ. ನಾವುಗಳೇ ಅವುಗಳ ಜಾಗಕ್ಕೆ ಹೋಗಿದ್ದೇವೆ ಎಂಬ ಸತ್ಯವರಿಯದ ನಾವು ಈಗ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೇವೆ ಅಷ್ಟೆ.
-ಮೂರ್ತಿ