ಮಡಿಕೇರಿ, ಸೆ. 6: ಜೂನಿಯರ್ ಚೇಂಬರ್ ಇಂಟರ್ ನ್ಯಾಷ್‍ನಲ್ ಅಧೀನದ ಜೆ.ಸಿ.ಐ. ಭಾರತದ ವಲಯ 14ರ ಘಟಕಗಳಲ್ಲೊಂದಾದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗಘಟಕದ ವತಿಯಿಂದ ನಿವೃತ್ತ ಸೇನಾನಿಗಳಿಗೆ ಗೌರವ ಸಮರ್ಪಣೆ ಇತ್ತೀಚೆಗೆ ನಡೆಯಿತು.

ಜೆ.ಸಿ.ಐ. ಭಾರತದ ಮಾರ್ಗದರ್ಶನದಂತೆ ತಿಂಗಳಿಗೊಂದೊಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಯೋಜನೆಯಂತೆ ಆಗಸ್ಟ್ ತಿಂಗಳಲ್ಲಿ ದೇಶ ಸೇವೆಯನ್ನು ಮಾಡಿದ ಸೇನಾನಿಗಳನ್ನು ಗೌರವಿಸುವ ಯೋಜನೆ ಇತ್ತು. ಈ ಹಿನ್ನೆಲೆ ಭಾರತೀಯ ಸೇನೆಯ ಇ.ಎಂ.ಇ. ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಗೈಯುತ್ತಿರುವ ಹಿರಿಯಚೇತನ ಪುಲಿಯಂಡ ಪಿ. ಪೊನ್ನಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಹೆಚ್.ಆರ್. ಮಧು, ಕಾರ್ಯದರ್ಶಿ ಪವನ್, ವಲಯ 14 ರ ವಲಯಾಧಿಕಾರಿ ವಿಕ್ರಂ ಮೂಡಗದ್ದೆ ಉಪಸ್ಥಿತರಿದ್ದರು. ಅತಿಥಿಗಳಾಗಿ ಜೆ.ಸಿ.ಐ. ಭಾರತದ ವಲಯ 14 ರ ಪೂರ್ವ ವಲಯ ಅಧ್ಯಕ್ಷ ಹಾಗೂ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಭಾಗವಹಿಸಿದ್ದರು.