ಶ್ರೀಮಂಗಲ, ಸೆ. 5 : ಹುದಿಕೇರಿ ಗ್ರಾ.ಪಂ.ನ ಹೈಸೊಡ್ಲೂರು ಗ್ರಾಮದಲ್ಲಿ ಹೊರಗಿನಿಂದ ಬಂದು ದಿಢೀರ್ ಆಗಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ನಿವೇಶನ ಮತ್ತು ಮನೆ ನಿರ್ಮಿಸಿಕೊಡಲು ಸರಕಾರವನ್ನು ಒತ್ತಾಯಿಸುತ್ತಿರುವವರನ್ನು ಜಿಲ್ಲಾಡಳಿತ ಕೂಡಲೇ ತೆರವುಗೊಳಿಸಿಕೊಡಬೇಕು. ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ, ಗ್ರಾಮದ ದಾಖಲಾತಿ ಹೊಂದಿರುವ ನಿವೇಶ ರಹಿತ ಪರಿಶಿಷ್ಟ ಪಂಗಡದವರಿಗೆ ವಸತಿ ನಿರ್ಮಿಸಿಲು ಬೆಂಬಲ ನೀಡುವುದಾಗಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಹೈಸೊಡ್ಲೂರು ಗ್ರಾಮದ ಪಯ್ಯಡ ಮಂದ್‍ನಲ್ಲಿ ಸಭೆ ಸೇರಿದ ಗ್ರಾಮಸ್ಥರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಾಸವಾಗಿದ್ದು, ಅಲ್ಲಿಯ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಹೊಂದಿರುವ ಕೆಲವರು ಹೈಸೊಡ್ಲೂರು ಗ್ರಾಮದ ಸರಕಾರಿ ಜಾಗದಲ್ಲಿ ಕೆಲವು ಸಮಯದಿಂದ ಶೆಡ್ ನಿರ್ಮಿಸಿಕೊಂಡು ನಿವೇಶನ ಮತ್ತು ವಸತಿಗಾಗಿ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಇಂತವರಿಗೆ ಇಲ್ಲಿ ಸೌಲಭ್ಯ ನೀಡಬಾರದು. ಹುದಿಕೇರಿ ಗ್ರಾ.ಪಂನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಹೈಸೊಡ್ಲೂರು ಗ್ರಾಮದ ಪರಿಶಿಷ್ಟ ಪಂಗಡದ ಅರ್ಹರಿಗೆ ಇಲ್ಲಿ ಸೌಲಭ್ಯ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಕೊಂಡಿರುವವರು ಬೇರೆ ಗ್ರಾಮದಲ್ಲಿ ತಮ್ಮ ಹೆಸರಿನಲ್ಲಿ ಕಾಫಿ ತೋಟ ಹೊಂದಿರುವ ಆರ್.ಟಿ.ಸಿ. ದಾಖಲೆ ಇದೆ. ಆದರೂ ತಾವು ನಿವೇಶನ ರಹಿತರೆಂದು ಹೇಳಿಕೊಂಡು ಮತ್ತು ಅಕ್ರಮವಾಗಿ ಸೌಲಭ್ಯ ಪಡೆಯಲು ಹವಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದಾಖಲೆ ಬಿಡುಗಡೆ ಮಾಡಿ ಕಿಡಿಕಾರಿದರು.
ಶೆಡ್‍ನಲ್ಲಿರುವವರು ಕೊಡಗಿನ ವಿವಿಧ ಗ್ರಾಮಗಳಿಂದ ಬಂದಿದ್ದು, ಬೇರೆ ಬೇರೆ ಗ್ರಾಮದಲ್ಲಿ ವಾಸವಿರುವ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಬೇರೆ ಗ್ರಾಮದಲ್ಲಿ ಹೊಂದಿರುವ ಆಸ್ತಿಯ ಆರ್.ಟಿ.ಸಿ. ಇತ್ಯಾದಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು.
ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿರುವ ಹಲವು ಕುಟುಂಬಕ್ಕೆ ಡಿ.ಎಸ್.ಎಸ್ ಸಂಘಟನೆಯ ಹಲವರು ಕುಮ್ಮಕ್ಕು ನೀಡುತ್ತಿದ್ದು, ಗ್ರಾಮಸ್ಥರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರ ಪ್ರಚೋದನಾಕಾರಿ ಹೇಳಿಕೆಗಳಿಂದ ಗ್ರಾಮದ ಸಾಮರಸ್ಯ ಕದಡುತ್ತಿದ್ದು, ಅಶಾಂತಿ ಸೃಷ್ಟಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶೆಡ್ ನಿರ್ಮಿಸಿಕೊಂಡಿರುವ ಗುಂಪು ಆಗಾಗ ಹೈಸೊಡ್ಲೂರು ಗ್ರಾಮಕ್ಕೆ ಬಂದು ಇದ್ದು ಹೋಗುತ್ತಿದೆ. ಒಂದು ವಾರ ಒಂದು ಗುಂಪು ವಾಸವಿದ್ದರೆ, ಮತ್ತೊಂದು ವಾರ ಅದೇ ಶೆಡ್‍ನಲ್ಲಿ ಮತ್ತೊಂದು ಗುಂಪು ವಾಸವಿರುತ್ತದೆ. ಹಾಗೆಯೇ ತಮ್ಮ ದಾಖಲೆ ಇರುವ ಮೂಲ ಗ್ರಾಮದಲ್ಲಿಯೂ ವಾಸವಾಗಿರುತ್ತಾರೆ ಎಂದು ವಿವರಿಸಿದರು.
ಹೈಸೊಡ್ಲೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸ್ಥಳೀಯವಾಗಿ ದಾಖಲೆ ಹೊಂದಿರುವ ಖಾಯಂ ನಿವಾಸಿಗಳಿಗೆ, ಅರ್ಹರಿಗೆ ಪಾರದರ್ಶಕವಾಗಿ ನೀಡುತ್ತಿದ್ದು, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ಗ್ರಾಮಸ್ಥರು ವಿವರಿಸಿದರು.
ಪತ್ರಕರ್ತರು, ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಜಿಲ್ಲೆಯ ವಿವಿಧೆಡೆಗಳಿಂದ ಜನರನ್ನು ಮತ್ತು ಮಕ್ಕಳನ್ನು ಸೇರಿಸಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಗ್ರಾಮದಲ್ಲಿ ಜಾತಿ ಬೇಧವಿಲ್ಲದೇ ಸಾಮರಸ್ಯದಿಂದ ಎಲ್ಲರು ಬದುಕುತ್ತಿದ್ದು, ಹೊರಗಿನಿಂದ ಬಂದಿರುವ ಈ ಗುಂಪು ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕೆಲವು ಸ್ವಯಂ ಘೋಷಿತ ಹೊರಗಿನ ಮುಖಂಡರಿಂದ ಅಶಾಂತಿಗೆ ದಾರಿಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿ ಗ್ರಾಮಸ್ಥರಾದ ಡಿ.ಜಿ. ಮೋಹನ್, ಡಿ.ಎಲ್ ಧರ್ಮಜ, ಎಂ.ಎಂ. ಆಶೋಕ್, ಬಿ.ಪಿ. ಪೂಣಚ್ಚ, ಬಿ.ಪಿ. ಕಿಶೋರ್, ಎಂ.ಪಿ ಸೋಮಯ್ಯ, ಎಂ.ಪಿ ವೀಟು, ಕೆ.ಕೆ. ರೋಶನ್, ಬಿ.ಬಿ. ಸೋಮಯ್ಯ, ಬಿ.ಕೆ. ನವೀನ್, ಬಿ.ಪಿ. ಮಹಾಬಲ, ಎಂ.ಎ. ರಮೇಶ್, ಕೆ.ಪಿ. ವಾಸು, ಬಿ.ಎನ್. ಮುತ್ತಣ್ಣ, ಎಂ.ಎಂ. ವಸಂತ, ಬಿ.ಆರ್. ರಾಜೇಶ್, ಬಿ.ಎನ್. ಉತ್ತಯ್ಯ, ಎಂ.ಟಿ. ಗಗನ್, ಕೆ.ಪಿ. ಪ್ರಕಾಶ್, ಸಿ.ಎಸ್. ತಮ್ಮುಣಿ, ಬಿ.ಎಸ್. ಪೂವಣ್ಣ, ಎನ್.ವಿ. ಪೆÇನ್ನಪ್ಪ, ಕೆ.ಕೆ.ದೊರೆಮಣಿ, ಕೆ.ಕೆ. ಕಿಟ್ಟಿ, ಕೆ.ಬಿ. ಸುಬ್ರಮಣಿ, ಸಿ.ಆರ್. ತಿಮ್ಮಯ್ಯ, ಪಿ.ಕೆ. ಚೇತನ್, ಎಂ.ಪಿ. ಅಜಿತ್, ಸಿ.ಎನ್. ತಮ್ಮಯ್ಯ, ಸಿ.ಪಿ. ಅನು, ಬಿ.ಪಿ. ದೇವಯ್ಯ, ಎಂ.ಯು. ಕವಿನಾ, ಎಂ.ಪಿ. ರವಿ ಮತ್ತಿತರರು ಹಾಜರಿದ್ದರು.