ಮಡಿಕೇರಿ, ಸೆ. 5: ಮುಗ್ಧ ವಿದ್ಯಾರ್ಥಿಗಳ ಭವಿಷ್ಯವನ್ನು ಸರಿದಾರಿಯಲ್ಲಿ ರೂಪಿಸುವ ಮಹತ್ತರವಾದ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಮೈಕಲರ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದೊಂದಿಗೆ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕ ಸಮೂಹಕ್ಕೆ ಒಳಿತಾಗಲಿ ಎಂದು ಆಶಯ ನುಡಿಯಾಡಿದರು.
ಎಳೆಯ ಮಕ್ಕಳ ತುಂಟತನವನ್ನು ಸಹಿಸಿಕೊಂಡು ಅವರ ಪ್ರತಿಭೆ ಹೊರಹೊಮ್ಮುವಂತೆ ನೋಡಿಕೊಳ್ಳುವಲ್ಲಿ ಶೀಕ್ಷಕರು ಯಾವ ರೀತಿ ಸೂಕ್ಷ್ಮ ದೃಷ್ಟಿಯಿಂದ ಶ್ರಮಿಸುತ್ತಾರೆ ಎಂದು ತಮ್ಮ ಬಾಲ್ಯದ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಜಿಲ್ಲಾಧಿಕಾರಿಗಳು, ಇಂದು ಉನ್ನತ ಶಿಕ್ಷಣದೊಂದಿಗೆ ಉತ್ತಮ ಹುದ್ದೆಗಳಲ್ಲಿ ಕುಳಿತು ನೋಡಿದಾಗ ನಮ್ಮ ಗುರುಗಳ ಅಂದಿನ ಪರಿಶ್ರಮ ಅರ್ಥವಾಗಲಿದೆ ಎಂದರು. ಅಲ್ಲದೆ ತಾವು ಜಿಲ್ಲಾಧಿಕಾರಿ ಹೊಣೆಗಾರಿಕೆಯಲ್ಲಿ ಜನತೆಗೆ ಕಲ್ಪಿಸುವ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡುವೆ ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವದಾಗಿ ವಿವರಿಸಿದರು.
ಶ್ಲಾಘನೀಯ ಸೇವೆ : ಬೆಟ್ಟಗುಡ್ಡಗಳ ನಡುವಿನ ಕೊಡಗಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕರ್ತವ್ಯ ನಿರತರಾಗಿರುವ ಶಿಕ್ಷಕರು, ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ಹಾಗೂ ಪ್ರಾಕೃತಿಕ ವಿಪತ್ತುಗಳನ್ನು ಲೆಕ್ಕಿಸದೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ನೆನಪಿಸಿದರು.
ಶಿಕ್ಷಕರು ಮಾರ್ಗದರ್ಶಕರು : ದಿನದ ಮಹತ್ವ ಕುರಿತು ನಗರದ ಸಂತಜೋಸೆಫರ ಪ.ಪೂ. ಕಾಲೇಜಿನ ಉಪನ್ಯಾಸಕಿ ಜಯಲಕ್ಷ್ಮಿ ಅವರು ಮಾತನಾಡುತ್ತಾ, ದಾರ್ಶನಿಕರ ಆಶಯದಂತೆ ಶಿಕ್ಷಕರೆಂದರೆ ಸಮಾಜವನ್ನು ತಿದ್ದುವ ಮಾರ್ಗದರ್ಶಕರಾಗಿದ್ದಾರೆ. ಡಿವಿಜಿ ಹಾಗೂ ಸ್ವಾಮಿ ವಿವೇಕಾನಂದರು ಮತ್ತು ಡಾ ಎಪಿಜಿ ಅಬ್ದುಲ್‍ಕಲಾಂ ಮೊದಲಾದವರ ಆಶಯದಂತೆ ಜ್ಞಾನವನ್ನು ಬೋಧಿಸುವ ನಾವು ವೃತ್ತಿ ಜೀವನದಲ್ಲಿ ಶೈಕ್ಷಣಿಕ ಮೌಲ್ಯಗಳಿಗೆ ಭಂಗ ಉಂಟಾಗದಂತೆ ನಡೆದುಕೊಳ್ಳೋಣ ಎಂದು ನುಡಿದರು.