ಮಡಿಕೇರಿ, ಸೆ. 5: ಶಿಕ್ಷಕರ ದಿನಾಚರಣೆಯ ನಡುವೆ ಇಂದು ಕೊಡಗಿನ ವಿವಿಧ ಖಾಸಗಿ ಅನುದಾನ ರಹಿತ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಪ್ರಮುಖರು ಹಾಗೂ ಶಿಕ್ಷಕರುಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಜಾಗತಿಕ ಕೊರೊನಾ ನಡುವೆ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ನೀಡಲು ಅನೇಕ ಸಮಸ್ಯೆಗಳು ಎದುರಾಗಿದ್ದು, ಸರಕಾರ ದಿಂದ ಅಗತ್ಯ ನೆರವು ಒದಗಿಸ ಬೇಕೆಂದು ಬೇಡಿಕೆ ಸಲ್ಲಿಸಿದರು.ಖಾಸಗಿ ಶಾಲೆಗಳಲ್ಲಿ ಸರಕಾರದ ಮೀಸಲು ಸೀಟುಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಮಕ್ಕಳ ಸಲುವಾಗಿ ಕಳೆದ ಸಾಲಿನ ಸಹಾಯಧನ (ಆರ್‍ಟಿಇ ನಿಧಿ) ಇನ್ನು ಬಿಡುಗಡೆ ಮಾಡಿಲ್ಲ ವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಜಾಗತಿಕ ಕೊರೊನಾ ನಡುವೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವಿವಿಧ ವರ್ಗಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಆರ್ಥಿಕ ನೆರವು ಕಲ್ಪಿಸಲಾಗಿದೆ.

ಅದೇ ರೀತಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೂ ಸಹಾಯಹಸ್ತ ನೀಡಬೇಕೆಂದು ಒತ್ತಾಯಿಸಲಾಯಿತು.

ಇನ್ನು ಶಾಲೆಗಳ ನೋಂದಣಿ ನವೀಕರಣಕ್ಕೆ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದ ಪ್ರಮುಖರು, ಸದ್ಯದ ಪರಿಸ್ಥಿತಿಯಲ್ಲಿ ನವೀಕರಣ ಪ್ರಕ್ರಿಯೆಗೆ ಆರು ತಿಂಗಳು ಕಾಲಾವಕಾಶ ವಿಸ್ತರಿಸಬೇಕೆಂದು ಗಮನ ಸೆಳೆದರು.

(ಮೊದಲ ಪುಟದಿಂದ) ಕೊರೊನಾ ನಡುವೆ ಮಕ್ಕಳ ಪ್ರವೇಶಾತಿಗೆ ಶಿಕ್ಷಣ ಅಧಿಕಾರಿಗಳು ಆಡಳಿತ ಮಂಡಳಿಗೆ ಕಿರುಕುಳ ನೀಡುತ್ತಿರುವದಾಗಿ ದೂರಿದರಲ್ಲದೆ, ಈ ಬಗ್ಗೆ ಸರಕಾರ ಅಗತ್ಯ ಮಾರ್ಗಸೂಚಿ ನೀಡಬೇಕೆಂದು ಒತ್ತಾಯಿಸಿದರು.

ಖಾಸಗಿ ವಿದ್ಯಾಸಂಸ್ಥೆಗಳ ಅನುದಾನ ರಹಿತ ಶಾಲಾ ಒಕ್ಕೂಟದ ಪದಾಧಿಕಾರಿಗಳಾದ ಝರು ಗಣಪತಿ, ಕೋಟ್ರಂಗಡ ತಿಮ್ಮಯ್ಯ, ಸುಜಲಾದೇವಿ ಮೊದಲಾದವರು ನೇತೃತ್ವ ವಹಿಸಿದ್ದು, ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಪ್ರಮುಖರಾದ ಎಂ.ಎಸ್. ಪೂವಯ್ಯ, ಸಚಿನ್, ವಾಸುದೇವ್, ಲಿಖಿತ್ ದಾಮೋದರ್, ಬೋಪಣ್ಣ ಮೊದಲಾದವರು ಹಾಜರಿದ್ದರು.