ದಿನಕ್ಕೆ 1 ಲಕ್ಷ ಕೋವಿಡ್ ಪರೀಕ್ಷೆ
ಬೆಂಗಳೂರು, ಸೆ. 5: ರಾಜ್ಯದಲ್ಲಿ ಕೊರೊನಾ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ ಮತ್ತು ಪರೀಕ್ಷೆಗಳನ್ನು ಹೆಚ್ಚಿಸಿರುವುದರಿಂದ ಕರ್ನಾಟಕ ಶೀಘ್ರದಲ್ಲೇ ದಿನಕ್ಕೆ ಒಂದು ಲಕ್ಷ ಕೋವಿಡ್ ಪರೀಕ್ಷೆ ನಡೆಸುವ ಗುರಿ ತಲುಪಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಶನಿವಾರ ಹೇಳಿದ್ದಾರೆ. ಒಂದು ಪರೀಕ್ಷಾ ಪ್ರಯೋಗಾಲಯದಿಂದ, ನಾವು ಆರು ತಿಂಗಳಲ್ಲಿ 108 ಲ್ಯಾಬ್‍ಗಳನ್ನು ತೆರೆದಿದ್ದೇವೆ. ದಿನಕ್ಕೆ 300 ಪರೀಕ್ಷೆಗಳಿಂದ ನಾವು ಅದನ್ನು 75,000 ಕ್ಕೆ ಹೆಚ್ಚಿಸಿದ್ದೇವೆ. ಇದು ಶೀಘ್ರದಲ್ಲೇ ದಿನಕ್ಕೆ ಒಂದು ಲಕ್ಷ ಪರೀಕ್ಷೆಗಳ ಗುರಿಯನ್ನು ತಲುಪಲಿದೆ ಎಂದು ಸುಧಾಕರ್ ಹೇಳಿದ್ದಾರೆ.
ತಾ.12 ರಿಂದ ರೈಲು ಸಂಚಾರ ಆರಂಭ
ನವೆದಹಲಿ, ಸೆ.5 : ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದರೂ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುತ್ತಿದ್ದು, ತಾ.12ರಿಂದ ಮತ್ತೆ 80 ವಿಶೇಷ ರೈಲುಗಳು ಸಂಚರಿಸಲಿವೆ. ತಾ.12 ರಿಂದ 40 ಜೋಡಿ ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದ್ದು, ತಾ.10 ರಿಂದ ಬುಕಿಂಗ್ ಆರಂಭವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ. ದೇಶದಲ್ಲಿ ಈಗಾಗಲೇ 230 ರೈಲುಗಳು ಸಂಚರಿಸುತ್ತಿದ್ದು, ಈಗ ಹೆಚ್ಚುವರಿಯಾಗಿ ಮತ್ತೆ 80 ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ಯಾವದ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ
ಬೆಂಗಳೂರು, ಸೆ.5 : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಕೆಎಸ್‍ಆರ್‍ಟಿಸಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದೆ. ಇದೇ ತಾ. 7 ರಿಂದ 19 ರವರೆಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಈ ವೇಳೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‍ಆರ್ ಟಿಸಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಪರೀಕ್ಷೆಗೆ ತೆರಳಲು ಮಾತ್ರ ಈ ಉಚಿತ ಬಸ್ ಪ್ರಯಾಣದ ಅವಕಾಶವಿದೆ.
ಚೀನಾ ದ್ವಿಪಕ್ಷೀಯ ಒಪ್ಪಂದ ಮುರಿದಿದೆ
ನವದೆಹಲಿ, ಸೆ.5 : ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಮಾಸ್ಕೊದಲ್ಲಿ ಉಭಯ ದೇಶಗಳ ನಾಯಕರ ಮಧ್ಯೆ ಸುಮಾರು ಎರಡೂವರೆ ಗಂಟೆ ಕಾಲ ಸಭೆ ನಡೆದಿದೆ. ಅದರಲ್ಲಿ ಚೀನಾದ ಆಕ್ರಮಣಕಾರಿ ನಡತೆ ಮತ್ತು ಗಡಿಯಲ್ಲಿ ಯಥಾಸ್ಥಿತಿ ಮುರಿಯುವ ಪ್ರಯತ್ನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ. ನಿಮ್ಮ ಈ ನಡೆಯನ್ನು ಒಪ್ಪಲು ಖಂಡಿತಾ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕ್‍ನಿಂದ ಗುಂಡಿನ ದಾಳಿ
ಜಮ್ಮು, ಸೆ.5 : ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮೂರು ವಲಯಗಳಲ್ಲಿ ಪಾಕಿಸ್ತಾನ ಸೇನಾಪಡೆ ಶನಿವಾರ ಬೆಳಗಿನಿಂದ ತೀವ್ರ ಗುಂಡಿನ ದಾಳಿಯಲ್ಲಿ ತೊಡಗಿ ಕದನ ವಿರಾಮ ಉಲ್ಲಂಘಿಸಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಪೂಂಚ್ ಜಿಲ್ಲೆಯ ಶಹ್ ಪುರ್, ಕಿರ್ನಿ ಮತ್ತು ದೆಗ್ವಾರ್ ವಲಯಗಳಲ್ಲಿ ಗುಂಡಿನ ಮತ್ತು ಶೂಟಿಂಗ್ ದಾಳಿ ಇಂದು ಬೆಳಗ್ಗೆ 9.15ರ ಹೊತ್ತಿಗೆ ಆರಂಭವಾಯಿತು. ಇದಕ್ಕೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಯಾವುದೇ ಸಾವು, ನೋವು ಆದ ವರದಿಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.