ಕಾವೇರಿಗೆ ಹರಕೆ ಹೊತ್ತು ನೆರವೇರಿಸುವುದು : ಇವುಗಳೆಲ್ಲ ಹಳೇ ಸಂಪ್ರದಾಯಗಳು. ಕೆಲವು ನಾನು ಕಣ್ಣಾರೆ ಕಂಡದ್ದು. ಮತ್ತೆ ಕೆಲವು ಹಿರಿಯರಿಂದ ಕೇಳಿ ಅರಿತದ್ದು. (1) ತೊಟ್ಟಿಲು ಮಗು (ಕುಂಞÂ ತೊಟ್ಟ್) (2) ಹಾಲು, ಮಜ್ಜಿಗೆ, ಪಾನಕ (3) ತೂಡ್ ಪರಕೆ (ದೊಂದಿ) 4. ತಂಡ್ ಪರಕೆ (ಊರುಗೋಲು).
ತೊಟ್ಟ್ ಕುಂಞÂ ಪರಕೆ : ಮಕ್ಕಳೇ ಇಲ್ಲದವರು, ಗಂಡು ಮಕ್ಕಳಿಲ್ಲ ದವರು, ಹೆತ್ತ ಒಂದೆರೆಡು ಮಕ್ಕಳು ಸತ್ತು ಹೋದರೆ ‘‘ಕಾವೇರಿಗೆ ತೊಟ್ಟಿಲಿನಲ್ಲಿ ಮಗು ಹೊತ್ತುಕೊಂಡು ಬಂದು ಹರಕೆ ಸಲ್ಲಿಸುತ್ತೇನೆ’’ ಎಂದು ಹರಕೆ ಹೊರುತ್ತಿದ್ದರು. ಅವರ ಆಸೆ ನೆರವೇರಿದರೆ ಜನಿಸಿದ ಮಗು ಹೆಜ್ಜೆಯಿಕ್ಕಿ ನಡೆಯುವುದಕ್ಕೆ ಮೊದಲು ಹರಕೆ ಸಲ್ಲಿಸಲೇ ಬೇಕು. ಅದರ ಕ್ರಮ ಹೇಗೆಂದರೆ ಆ ಮಗು ಮತ್ತು ಅದರ ತೊಟ್ಟಿಲನ್ನು ಹೊತ್ತುಕೊಂಡು ಸಾಗಬೇಕು. ಮನೆಯಿಂದ ಹೊರಡುವಾಗ ತೊಟ್ಟಿಲಲ್ಲಿ ಮಲಗಿಸಿ ತಲೆಮೇಲೆ ಹೊತ್ತು ಸ್ವಲ್ಪದೂರ ಹೋದ ಮೇಲೆ ಮಗುವನ್ನು ತೋಳಿನಲ್ಲಿ ಎತ್ತಿಕೊಳ್ಳಬಹುದು. ಆಗ ಖಾಲಿ ತೊಟ್ಟಿಲನ್ನು ಕೊಂಡೊಯ್ಯಲು ಒಬ್ಬ ಆಳಿನ ನೇಮಕವಾಗಬೇಕು.
ಭಾಗಮಂಡಲದ ದೇವಸ್ಥಾನ ದೂರದಿಂದ ಕಾಣುವಾಗ ಮಗುವನ್ನು ತೊಟ್ಟಿಲಲ್ಲಿರಿಸಿ ತಲೆಮೇಲೆ ತಂದೆ-ತಾಯಿ ಹೊರಬೇಕು. ತಂದೆ-ತಾಯಿ ಸ್ನಾನ ಮುಗಿಸಿ, ತೊಟ್ಟಿಲು ಮಗುವನ್ನು ಹೊತ್ತು ಗರ್ಭಗುಡಿಗೆ ಮೂರು ಪ್ರದಕ್ಷಿಣೆ ಹಾಕಿ, ಗರ್ಭಗುಡಿಯ ಎದುರಿರಿಸಿ ಅತ್ತಿತ್ತ ಜೋಕಾಲಿ ಯಂತೆ ಆಡಿಸಬೇಕು. ಅರ್ಚಕರಿಂದ ತೀರ್ಥ ಪ್ರೋಕ್ಷಿಸಿಕೊಂಡು ಹೂಗಂಧವಿಟ್ಟು ಹರಸು ವಂತಾಗಬೇಕು. ಪುತ್ರನಾಗಿದ್ದರೆ ಕೆಲವರು ಅಲ್ಲಿಯೇ ಕಾವೇರಪ್ಪ ಎಂಬ ನಾಮಕರಣ ಮಾಡುವುದೂ ಇತ್ತಂತೆ. ಕೆಲವರು ಭಾಗವಂಡಲದಲ್ಲಿ ಹರಕೆ ತೀರಿಸಿ ಹಿಂತಿರುಗಿದರೆ, ಕೆಲವರು ತಲಕಾವೇರಿ ತನಕ ಹೊತ್ತೊಯ್ದು ಅಲ್ಲಿಯೂ ಇದೇ ವಿಧದಲ್ಲಿ ಹರಕೆ ಒಪ್ಪಿಸಿ ಹಿಂತಿರುಗುತ್ತಿದ್ದರು.
[ನನ್ನ ತಂದೆಗೆ ಬಹಳ ವರ್ಷ ಗಂಡು ಮಕ್ಕಳಿಲ್ಲದೆ ತೊಟ್ಟ್‍ಕುಂಞÂ ಪರಕೆ ಕಟ್ಟಿದ ಮೇಲೆ ನನ್ನ ಅಣ್ಣ ಹುಟ್ಟಿದನಂತೆ. ತೊಟ್ಟಿಲು ಸಮೇತ ಭಾಗಮಂಡಲ ಮತ್ತು ತಲಕಾವೇರಿಗೆ ಕೈಗೊಂಡ ಯಾತ್ರೆಯನ್ನು ನನ್ನ ತಾಯಿ ಸ್ವಾರಸ್ಯವಾಗಿ ಹೇಳುತ್ತಿದ್ದರು.]
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಚೇರಂಬಾಣೆಗೆ ನಡೆದು ಬಂದು ಕಾವೇರಿ ಯಾತ್ರಾರ್ಥಿಗಳನ್ನು ನೋಡುವುದೊಂದು ಮನರಂಜನೆ. ಕಿಗ್ಗಟ್ಟುನಾಡು ಅಂದರೆ ಶ್ರೀಮಂಗಲ, ಮರೆನಾಡು ಕಡೆಗಳಿಂದ ತೊಟ್ಟಿಲು ಮಗು ಸಮೇತ ಕಾಲ್ನಡಿಗೆಯಲ್ಲಿ ಬರುವವ ರನ್ನು ನೋಡುತ್ತಿದ್ದೆವು, ಸುಮಾರು 1942-43ರಿಂದ ವಾಹನ ಸೌಕರ್ಯ ಬಂದು ಆ ಹಳೆದೃಶ್ಯಗಳೆಲ್ಲ ನೆನಪಿನ ಪಟಲದಲ್ಲಿ ಮಾತ್ರ ಉಳಿದಿದೆ.
ತೊಟ್ಟ್ ಕುಂಞÂ : (ಕನ್ನಡದಲ್ಲಿ ತೊಟ್ಲು ಕುಂಞÂ) ಇದೊಂದು ಊರು, ಚೇರಂಬಾಣೆ ಅರುಣ ಜೂನಿಯರ್ ಕಾಲೇಜಿನ ಆಚೆ. ಕುಂಞÂತೊಟ್ಟ್ ಹರಕೆ ಹೊತ್ತ ದಂಪತಿಗಳು ಅಲ್ಲಿ ವಿಶ್ರಮಿಸಿದಾಗ ನಿದ್ದೆ ಹತ್ತಿತ್ತು. ಎಚ್ಚರವಾದಾಗ ತಾಯಿ ಮಗು ಶಿಲೆಯಾಗಿ ಹೋಗಿದ್ದರು. ಅಂದಿನಿಂದ ಕಾವೇರಿ ಯಾತ್ರಿಕರು ಆ ಶಿಲೆಗೆ ನೆರಳು ಒದಗಿಸಲು ಒಂದು ಸೊಪ್ಪಿನ ಗೊನೆ ಮುರಿದು ಹಾಕಿ ಮುಂದೆ ಸಾಗುವ ಸಂಪ್ರದಾಯವಿದೆ. ಆ ಸ್ಥಳಕ್ಕೆ ಈಗಲೂ ಹೆಸರು ತೊಟ್ಟ್ ಕುಂಞÂ, ಕುಂಞÂ ತೊಟ್ಟ್, ತೊಟ್ಲು ಕುಂಞÂ ಇತ್ಯಾದಿ.
[40 ನೇ ದಶಕದಲ್ಲೂ ಕೂಡ ಕಾಲ್ನಡಿಗೆಯಲ್ಲಿ ಹೋಗುವವರು ಸಾಕಷ್ಟು ಮಂದಿ ಇರುತ್ತಿದ್ದರು. ಜಾತ್ರೆ ಕಳೆದ ಮೇಲೆ ಹೋದರೆ ಯಾತ್ರಿಕರು ಹಾಕಿದ ಸೊಪ್ಪು ಗುಡ್ಡೆ ಇರುತ್ತಿತ್ತು. ಈಗ ಅದೆಲ್ಲ ನಿವೇಶನ ಗಳಾಗಿ ಹೋಗಿವೆ.)
ಹಾಲು ಹರಕೆ : ಚಿಕ್ಕ ಮಕ್ಕಳಿಗೆ ಬರುವ ಬಾಲಗ್ರಹ, ದನಕರು ಗಳಿಗೆ ಬರುವ ರೋಗ ಮತ್ತು ದನಕರುಗಳಿಗೆ ಹುಲಿ, ಚಿರತೆಗಳ ಉಪದ್ರವದ ನಿವಾರಣೆ ಬಯಸಿ ಬೇಂಗು ನಾಡು, ತಾವು ನಾಡಿನ ಜನ ಹಾಲು ಮಜ್ಜಿಗೆ ದಾನದ ಹರಕೆ ಹೊರುತ್ತಿದ್ದರು. ಕಾಲ್ನಡಿಗೆಯಲ್ಲಿ ತೊಟ್ಟಿಲು ಮಗು ಸಹಿತ ಹೋಗುವವರ ಮಗುವಿಗೆ ಹಾಲುಣಿಸಲು ದಾರಿ ಬದಿಯಲ್ಲಿ ಹರಕೆ ಹೊತ್ತವರು ಸಾಕಷ್ಟು ಮಂದಿ ಇರುತ್ತಿದ್ದರಂತೆ. ಹಾಗೆಯೇ ಮಜ್ಜಿಗೆ ಮತ್ತು ಬೆಲ್ಲದ ಪಾನಕ ದಾನಿಗಳೂ ಇರುತ್ತಿದ್ದರಂತೆ. (ಹಿರಿಯರು ಹೇಳಿದ್ದು]
ತೂಡ್ ಪರಕೆ : (ದೊಂದಿ ಹರಕೆ) ಕೆಲವರಿಗೆ ‘‘ಇರ್‍ಕಣ್ಣ್’’ ರೋಗ ಬರುತ್ತದೆ. ರಾತ್ರಿ ಆವರಿಸಿದ ಮೇಲೆ ‘‘ಕಣ್ಣು ಕಾಣದಾಗುವುದು. ಇದಲ್ಲದೆ ಕಣ್ಣಿನ ದೃಷ್ಟಿದೋಷಕ್ಕೆ ಕಾವೇರಿಗೆ ಹರಕೆ ಒಪ್ಪಿಸುವುದು. ಇದಕ್ಕೆ ತೂಡ್‍ಪರಕೆ, ಅರೆಭಾಷೆಯಲ್ಲಿ ಸೂಟೆಹರ್ಕೆ ಎಂದೆಲ್ಲ ಇತ್ತಂತೆ.
ರಾತ್ರಿ ಹೊತ್ತಲ್ಲಿ ತೀರ್ಥೋದ್ಭವ ಆಗುವ ವಷರ್À ಮಾತ್ರ ಈ ಹರಕೆ. ಭಾಗಮಂಡಲದಿಂದ ತಲಕಾವೇರಿಗೆ ರಾತ್ರಿ ನಡೆಯುವವರ ಸೌಕರ್ಯಕ್ಕಾಗಿ ಕಠಿಣ ದಾರಿ ಇರುವಲ್ಲಿ ಪೆಟ್ರೋಮ್ಯಾಕ್ಸ್ ತೂಗಿಡುತ್ತಿದ್ದುದು ನಮ್ಮೆಲ್ಲರ ಅನುಭವ. ಆದರೆ, ಈ ಪೆಟ್ರೋಮ್ಯಾಕ್ ಬಳಕೆಗೆ ಬರುವ ಮೊದಲು ಒಣಗಿದ ವಾಟೆ, ಬಿದಿರಿನ ಚೂರು ಅಥವಾ ಬೀಟಿ ಮರವನ್ನು ತೆಳುವಾಗಿ ಸೀಳಿ ದೊಂದಿ ಕಟ್ಟಿಟ್ಟುಕೊಂಡು ಅದಕ್ಕೆ ಬೆಂಕಿಹಚ್ಚಿ ಯಾತ್ರಿಕರ ಗುಂಪುಗಳಿಗೆ ದಾರಿ ದೀಪವಾಗಿ ಕೊಡುತ್ತಿದ್ದುದು ಒಂದು ಧರ್ಮದ ಕಾರ್ಯವಾಗಿತ್ತಂತೆ, ಆ ಸೇವೆಗೆ ಪ್ರತಿಯಾಗಿ ಹಣ ಪಡೆಯುವಂತಿಲ್ಲ.
ತುಂಡ್‍ಪರಕೆ (ಊರುಗೋಲು ಸೇವೆ) : ಪಾಶ್ರ್ವವಾಯುವಿನಂತಹ ರೋಗ ಪೀಡಿತರಾಗಿ ನಡೆಯಲಾರದ ಸ್ಥಿತಿಗೆ ಬಂದವರ ಚಿಕಿತ್ಸಾ ವಿಧಾನವಾಗಿ ತಲಕಾವೇರಿಗೆ (ನಡೆದು ಹೋಗುವ ವೃದ್ಧರಿಗೆ ಊರುಗೋಲು ಹರಕೆ ಹೊತ್ತವರು ದಾರಿ ಬದಿಯಲ್ಲಿ ಊರುಗೋಲು ಸೇವಾ ನಿರತರಾಗಿರುತ್ತಿದ್ದರಂತೆ. ಇವೆಲ್ಲ ನಮ್ಮ ಕಾಲದಲ್ಲಿರಲಿಲ್ಲ; ಹಿರಿಯರ ಅನುಭವದ ನುಡಿ.)
ಎಡಮೆಕುಳಿ (ನೆರ್ಮೆಕುಳಿ): ಅಂದರೆ ಒಂದು ವರ್ಷವೂ ಎಡೆಬಿಡದೆ ಹನ್ನೆರಡು ವರ್ಷಗಳ ತನಕ ತೀರ್ಥಯಾತ್ರೆ ಮಾಡುವ ಹರಕೆ ಅದು. ಅಪರೂಪಕ್ಕೊಂದೊಂದು ಈಗಲೂ ಇದೆ. ಅದರ ಲೆಕ್ಕ ತಪ್ಪಿ ಹೋಗದಂತೆ ಪ್ರತೀ ವರ್ಷ ತೀರ್ಥ ತೆಗೆದುಕೊಂಡು ಬಂದ ‘‘ವಾಟೆಕುತ್ತಿ’’ಯನ್ನು ಮನೆಗಳಲ್ಲಿ ರಕ್ಷಿಸಿಡುತ್ತಿದ್ದರು. ಅದರ ಸಂಖ್ಯೆ 12 ಆದ ಮೇಲೆ ಅವುಗಳನ್ನೆಲ್ಲಾ ಹರಿಯುವ ನೀರಿನಲ್ಲಿ ಬಿಡುತ್ತಿದ್ದರು.
ತೀರ್ಥಗುತ್ತಿ : ಸುಮಾರು 60 ವರ್ಷಗಳಿಗೆ ಮೊದಲು ಈಗಿನಂತೆ ಪ್ಲಾಸ್ಟಿಕ್ ಬಾಟ್ಲಿಗಳಾಗಲೀ, ಡಬ್ಬಗಳಾಗಲೀ ಲಭ್ಯವಿರಲೂ ಇಲ್ಲ. ಅಲ್ಲದೆ, ಕಾವೇರಿ ತೀರ್ಥವನ್ನೂ ವಾಟೆಯ ಕೊಳವೆಗಳಲ್ಲೇ ತರಬೇಕೆಂಬ ನಂಬಿಕೆಯೂ ಬಲವಾಗಿತ್ತು.
ವಾಟೆಯು ತಲಕಾವೇರಿ ಸಮೀಪ ನದಿಯ ಇಕ್ಕೆಡೆಗಳಲ್ಲಿ ಯಥೇಚ್ಚವಾಗಿ ಬೆಳೆಯುತ್ತಿತ್ತು. ಸ್ಥಳೀಯರು ಅರಣ್ಯ ಇಲಾಖೆಯಂದ ಅನುಮತಿ ಪಡೆದು ವಾಟೆ ಕಡಿದು ಸುಮಾರು 21/2, 3 ಅಡಿ ಉದ್ದದ ಕೊಳವೆ ಗಳನ್ನು ಮಾಡಿ ರಾಶಿ-ರಾಶಿಯಿರಿಸಿ ಮಾರುತ್ತಿದ್ದರು. ನಲವತ್ತರ ದಶಕದಲ್ಲಿ ಒಂದು ಗುತ್ತಿಗೆ ಎರಡಾಣೆ ಬೆಲೆ ! ಬ್ರಹ್ಮಗಿರಿಯ ದರ್ಬೆ ಹುಲ್ಲನ್ನು ಕಿತ್ತು ಮುಚ್ಚಳ (ಕಾರ್ಕ್) ಮಾಡಿಕೊಳ್ಳುತ್ತಿದ್ದರು.
ಸಪ್ತರ್ಷಿ ಗುಂಡಿಗಳು : ಬ್ರಹ್ಮಗಿರಿಯ ಶಿಖರದ ಮೇಲೆ ಸಪ್ತ ಋಷಿಗಳು ತಪಸ್ಸು ಮಾಡಿದಾಗ ತಮ್ಮ ಬಳಕೆಗಾಗಿ ತೋಡಿಕೊಂಡಿದ್ದ ಏಳು ಹೊಂಡಗಳಿವೆ ಎಂಬದು ಪ್ರತೀತಿ. ಆದರೆ, ಯಾವದೇ ಕೊಡವ ತನ್ನ ತಂದೆ-ತಾಯಿ ಬದುಕಿರುವ ತನಕ ಶಿಖರ ಏರಬಾರದು, ಅದು ಧರ್ಮ ದ್ರೋಹ ಎಂಬ ನಂಬಿಕೆ. (ನನ್ನ ತಂದೆ ಸತ್ತಿದ್ದು ತಾಯಿ ಜೀವಿಸಿದ್ದರು) ಆ ಸಪ್ತ ಕೊಳಗಳನ್ನು ನೋಡುವ ಕುತೂಹಲದಿಂದ 1945 ರಲ್ಲಿ ಏರಿ ಹೋದೆ. ಆಗ ಮೂರು ಹೊಂಡಗಳಲ್ಲಿ ಮಾತ್ರ ನೀರಿತ್ತು. 1958ರಲ್ಲಿ ಬೆಟ್ಟವೇರಿ ನೋಡಿದಾಗ ನೀರೆಲ್ಲ ಬತ್ತಿತ್ತು. ಗಿರಿಶಿಖರಕ್ಕೆ ಕಾಂಕ್ರೀಟ್ ಮೆಟ್ಟಲು ಕಟ್ಟಿದ ಮೇಲೆ ತುದಿಯಲ್ಲಿ ಯಾವ ಕುರುಹೂಗಳೂ ಇಲ್ಲ. ಬದಲಿಗೆ ಕಸದ ರಾಶಿ !!
ಪಡಿಯಕ್ಕಿ : ಯಾತ್ರಾರ್ಥಿಗಳಿಗೆ ತಲಾ ಅಕ್ಕಿ ಪಡಿಯಿತ್ತು. (ಈಗ ಇದೆಯೋ ಗೊತ್ತಿಲ್ಲ) ಗುಂಪಿನ ನಾಯಕ ಹೋಗಿ ‘‘ನನ್ನ ಗುಂಪಿನಲ್ಲಿ ಇಂತಿಷ್ಟು ಮಂದಿ ಎಂದರೆ ಆಳಿಗೊಂದು ಪಡಿ (ಅಂದಾಜು ಒಂದು ಪಾವು) ಅಕ್ಕಿ, ಸ್ವಲ್ಪ ಒಣಮೆಣಸು, ಸ್ವಲ್ಪ ಉಪ್ಪು, ಸ್ವಲ್ಪ ಹುಣಸೆ ಕೊಡುತ್ತಿದ್ದರು. ದೇವಸ್ಥಾನದ ಹೊರಗಡೆ ಚಿಕ್ಕ-ಚಿಕ್ಕ ಒಣ ಸೌದೆಯ ಕಟ್ಟು ಮಾರುವವರಿರುತ್ತಿದ್ದರು. ದೇವಸ್ಥಾನದ ಪೌಳಿಯ ಕೋಣೆಗಳೆಲ್ಲ ಆಗಲೇ ಭರ್ತಿಯಾಗಿ, ಆಯಾ ಕೋಣೆಯ ಜನರೆಲ್ಲಾ ತಮ್ಮ ಪಡಿಯಕ್ಕಿಯ ಅನ್ನ ಬೇಯಿಸಿ ಊಟ ಮಾಡಿಕೊಳ್ಳುತ್ತಿದ್ದರು. ಆಗ ನಮ್ಮಂತ ಹುಡುಗರು ಸುಳ್ಳು ಹೇಳಿ ಐದಾರು ಜನರ ಪಡಿ ಸಂಪಾದಿಸಿ ಹೊರಗೆ ಬರುವಾಗ ಆ ಅಕ್ಕಿ ಮೆಣಸನ್ನೆಲ್ಲಾ ಪಡೆದು ಬದಲಿಗೆ ಒಂದಷ್ಟು ಅವಲಕ್ಕಿಗೆ ಬದಲಾಯಿಸುವ ವ್ಯಾಪಾರಿಗಳು ಕಾದಿರುತ್ತಿ ದ್ದರು.
ಪಡಿಯಕ್ಕಿ ವಂತಿಗೆ : ಕಾವೇರಿಯಲ್ಲಿ ಪಡಿಯಕ್ಕಿ ನೀಡಲು ಬೇರೆ-ಬೇರೆ ನಾಡಿನ, ಗ್ರಾಮದ ಮನೆ-ಮನೆಗಳಿಂದ ಭತ್ತ ಸಂಗ್ರಹಿಸುವವರಿ ದ್ದರು. ಕೊಳಗದಾಳುವಿನ ನಮ್ಮ ಮನೆಗಳಿಂದ ವರ್ಷಕ್ಕೊಮ್ಮೆ 2 ಅರೆ (20 ಸೇರು) ಭತ್ತ ಸಂಗ್ರಹಿಸಲು ಕೋಟೆರ ಮನೆತನದ ಇಬ್ಬರು ಬರುತ್ತಿದ್ದುದು ನೆನಪಿದೆ. 1950 ರಿಂದೀಚೆಗೆ ಯಾರೂ ಬಂದ ನೆನಪಿಲ್ಲ.
ನವದಂಪತಿಗಳ ಸಂಗಮ ಸ್ನಾನ : ಮದುವೆಯಾದ ವರ್ಷ ನವ ದಂಪತಿಗಳು ಕೈ-ಕೈ ಹಿಡಿದುಕೊಂಡು ಸಂಗಮದಲ್ಲಿ ಮುಳುಗಿ ಏಳುವುದು ಕಡ್ಡಾಯ ಸಂಪ್ರದಾಯ. ತೀರ್ಥೋದ್ಭವದಿಂದ ಕಿರು ಸಂಕ್ರಮಣದ ಒಳಗೆ ಯಾವಾಗ ಬೇಕಾದರೂ ಈ ರೀತಿ ಸಂಗಮ ಸ್ನಾನ ಮಾಡಬಹುದು.
ಲಕ್ಷ ದೀಪಕ್ಕೆ ಕೈಯೆಣ್ಣೆ (ಹರಳೆಣ್ಣೆ) ಹರಕೆ : ಆ ದೀಪ ಇತ್ತೀಚೆಗೆ ಕಾಣುತ್ತಿಲ್ಲ. ಅಂಗಾಂಗ ಕಳೆದುಕೊಂಡು ಎಲ್ಲೋ ಮೂಲೆ ಸೇರಿದೆ ಎನ್ನುತ್ತಾರೆ! ಕ್ರಿ.ಶ. 1886ರಲ್ಲಿ ದೊಡ್ಡ ಪುಲಿಕೋಟು ಗ್ರಾಮದ ಮಣವಟ್ಟಿರ (ಪಂದೇಟ್) ಬೋಪಯ್ಯ (ಬೆಳ್ಯಪ್ಪ ?) ಎಂಬವರು ಸಲ್ಲಿಸಿದ ಹರಕೆ ಅದಾಗಿತ್ತು. ಜಾತ್ರೆ ಸಮಯದಲ್ಲಿ ಅದರ ಎಲ್ಲಾ ಕೈಗಳಲ್ಲಿನ ದೀಪಗಳೂ ಹಗಲು ರಾತ್ರಿ ಉರಿಯುತ್ತಿತ್ತು. ಇದನ್ನು ಉರಿಸಲು ಕೈಯೆಣ್ಣೆ (ಶ್ರೀಮಂತರು ತುಪ್ಪ) ಹರಕೆ ಹೊತ್ತು, ದೀಪಕ್ಕೆ ಎಣ್ಣೆ ಸುರಿಯುತ್ತಾ ಕಾವೇರಿ ಭಜನೆ ಮಾಡುತ್ತಾ ಮಹಿಳೆಯರು ಸುತ್ತುವುದಿತ್ತು. ದೀಪದಿಂದ ಒಸರಿದ ಎಣ್ಣೆ ಕೆಲವು ಕಾಯಿಲೆಗಳಿಗೆ ದಿವ್ಯೌಷಧ ಎಂಬ ನಂಬಿಕೆ. ಅಂಗಾಲು ಬಿರುಕು ಬಿಡುವುದು, ತೊನ್ನು ರೋಗ, ಹುಳಕಡಿ ಇತ್ಯಾದಿ ಚರ್ಮರೋಗ ನಿವಾರಣೆಗಾಗಿ ಕೆಳಗೆ ಬಿದ್ದ ಎಣ್ಣೆಯನ್ನು ಸಂಗ್ರಹಿಸಿ ಕೊಂಡೊಯ್ಯುವವರ ದಂಡೇ ಇರುತ್ತಿತ್ತು.
ಮಹಾಯುದ್ಧದ ಸೈನಿಕರು : ಎರಡನೇ ಮಹಾಯುದ್ಧದಲ್ಲಿ ಬರ್ಮಾ, ಜಪಾನ್ ಯುದ್ಧಗಳಲ್ಲಿ ಭಾಗವಹಿಸಿದ ಕೊಡಗಿನ ಸೈನಿಕರು ಬರ್ಮಾದ ಕಗ್ಗಾಡಿನಲ್ಲಿ ದಾರಿ ಕಾಣದೆ ಶತ್ರು ವಶವಾಗುವ ಸಂದರ್ಭದಲ್ಲಿ ಕಾವೇರಿಗೆ ಹರಕೆ ಹೊತ್ತು ಪಾರಾಗುತ್ತಿದ್ದುದಕ್ಕೆ ಕೃತಜ್ಞತೆ ಸಲ್ಲಿಸಲು ಯುದ್ಧಾನಂತರ ರಜೆಯಲ್ಲಿ ಬಂದ ಸೈನಿಕರು ತಮ್ಮ ಸಮವಸ್ತ್ರ ಸಮೇತರಾಗಿ ಬಂದು ಹರಕೆ ಸಲ್ಲಿಸುತ್ತಿದ್ದ ದೃಶ್ಯ ಮನ ಮಿಡಿಯು ವಂತಿರುತ್ತಿತ್ತು.
(ಮುಂದುವರಿಯುವುದು)