ಮುಖ್ಯಮಂತ್ರಿಗಳಿಗೆ ಉಸ್ತುವಾರಿ ಸಚಿವ ಸೋಮಣ್ಣ ಪತ್ರ
ಬೆಂಗಳೂರು, ಸೆ. 4: ಇತ್ತೀಚೆಗೆ ಜಲಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಗೆ ಅತಿವೃಷ್ಟಿಯಿಂದ ಶಾಶ್ವತ ಪರಿಹಾರ, ಬೆಳೆ ಹಾನಿ ಮತ್ತು ಮೂಲಸೌಕರ್ಯದ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ವಿವರವಾಗಿ ಪತ್ರ ಬರೆದ ಸಚಿವ ಸೋಮಣ್ಣ ಜಿಲ್ಲೆಯಲ್ಲಿ 91 ಗ್ರಾಮಗಳು ಮಳೆಯಿಂದ ಉಂಟಾದ ಪ್ರವಾಹಕ್ಕೆ ತುತ್ತಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 41,026 ಹೆಕ್ಟೇರ್ ಬೆಳೆಹಾನಿ, ಅಂದಾಜು ರೂ. 415 ಕೋಟಿಗಳ ಮೂಲಸೌಕರ್ಯ ಹಾನಿಯಾಗಿದ್ದು, ಹಾನಿಗೀಡಾದ ರಸ್ತೆ, ಸೇತುವೆ, ಇತ್ಯಾದಿ ಮೂಲಸೌಕರ್ಯಗಳ ದುರಸ್ತಿ ಹಾಗೂ ಪುನರ್ನಿರ್ಮಾಣ ಸಮರೋಪಾದಿಯಲ್ಲಿ ಮಾಡಬೇಕು. ಜೊತೆಗೆ ರೈತರ ಜಮೀನಿನಲ್ಲಿ ಸಂಗ್ರಹವಾದ ಮರಳನ್ನು ರಾಯಲ್ಟಿ ಇಲ್ಲದೇ ಮಾರಾಟ ಮಾಡಲು ಭೂಮಾಲೀಕ ರೈತರಿಗೆ ಅವಕಾಶ ನೀಡಬೇಕು ಹಾಗೂ ಕಾಫಿ ಬೆಳೆಗಾರರ ತೋಟದಲ್ಲಿ ಬಿದ್ದಿರುವ ಬೆಲೆಬಾಳುವ ಮರಗಳನ್ನು ಹೊರತುಪಡಿಸಿ ಇತರೇ ಮರಗಳನ್ನು ಮಾರಾಟ ಮಾಡಲು ಅದೇ ರೈತರಿಗೆ ಅವಕಾಶ ನೀಡಬೇಕು.
ಹಿಂದಿನ ಸಾಲಿನಲ್ಲಿ ಘೋಷಣೆಯಾದ ಪ್ರವಾಹ ಪ್ಯಾಕೇಜ್ ರೂ. 536 ಕೋಟಿಗಳ ಪೈಕಿ ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದೂ ಸಹ ಪತ್ರದಲ್ಲಿ ವಿವರಿಸಿದ್ದಾರೆ. ಮುಂದುವರೆದು, ಜಿಲ್ಲೆಯು ಪದೇ ಪದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೂರು ತಾಲೂಕುಗಳನ್ನು ಅತಿವೃಷ್ಟಿಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಸೋಮಣ್ಣ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಅವರು ಈ ಬಗ್ಗೆ ಕೂಡಲೇ ಸೂಕ್ತ ಆದೇಶವನ್ನು ಸರ್ಕಾರದಿಂದ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.