ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ
ಲೇಹ್, ಸೆ. 4: ಭಾರತ ಹಾಗೂ ಚೀನಾ ನಡುವಿನ ವಾಸ್ತವಿಕ ಗಡಿ ಅಥವಾ ಎಲ್ಎಸಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ ಎಂದು ಭಾರತೀಯ ಸೇನಾಪಡೆಯ ಮುಖ್ಯಸ್ಥ ಎಂ.ಎಂ. ನರವಾಣೆಯವರು ಹೇಳಿದ್ದಾರೆ. ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನು ಆಡಿ, ಭಾರತದ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಚೀನಾ ಎರಡು ಬಾರಿ ಯತ್ನಿಸಿದ್ದು, ಇದೀಗ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ನಿನ್ನೆಯಷ್ಟೇ ಲಡಾಖ್ಗೆ ಭೇಟಿ ನೀಡಿದ ನರವಾಣೆಯವರು ಗಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಗಡಿ ಪರಿಸ್ಥಿತಿ ಕುರಿತಂತೆ ಹೇಳಿಕೆ ನೀಡಿರುವ ಅವರು, ನಿನ್ನೆಯಷ್ಟೇ ಲೇಹ್ಗೆ ಭೇಟಿ ನೀಡಿದ್ದೆ. ಸಾಕಷ್ಟು ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಜೆಸಿಒಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಯೋಧರ ನೈತಿಕಸ್ಥೈರ್ಯ ಹೆಚ್ಚಾಗಿದೆ. ಯಾವುದೇ ರೀತಿಯ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಯೋಧರು ಅತ್ಯುತ್ತಮರು. ನಮ್ಮ ಸುರಕ್ಷತೆ ಹಾಗೂ ಭದ್ರತೆಗಾಗಿ ನಾವು ಕೆಲವು ಮುನ್ನೆಚ್ಚರಿಕೆ ನಿಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಪ್ರಸ್ತುತ ಗಡಿ ನಿಯಂತ್ರಣ ರೇಖೆ ಬಳಿಕ ವಾತಾವರಣ ಗಂಭೀರವಾಗಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತನೆಗಳನ್ನು ನಡೆಸಲಾಗುತ್ತಿದೆ. ನಮ್ಮ ಭದ್ರತಾಪಡೆಗಳೂ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ಜಾಲದ ರಾಗಿಣಿ ಬಂಧನ
ಬೆಂಗಳೂರು, ಸೆ. 4: ಸ್ಯಾಂಡಲ್ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ನಟಿ ರಾಗಿಣಿಯನ್ನು ವಿಚಾರಣೆಗೆ ಕರೆತಂದಿದ್ದ ಸಿಸಿಬಿ ಅಧಿಕಾರಿಗಳು, ಸುಮಾರು ಏಳು ಗಂಟೆಗಳ ಸತತ ವಿಚಾರಣೆ ಬಳಿಕ ನಟಿಯನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಸೇವನೆ ಮತ್ತು ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ರಾಗಿಣಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಾಗಿಣಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಟಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ತಾ. 7ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ರಾಗಿಣಿಯನ್ನು ಬಂಧಿಸಿದ್ದಾರೆ. ನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬಳಿಕ ನಟಿ ರಾಗಿಣಿ ವಾಟ್ಸಪ್ ಚಾಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ವಾಟ್ಸಪ್ ಆ್ಯಪ್ ಡಿಲೀಟ್ ಮಾಡಿ ಹೊಸ ಮೊಬೈಲ್ ಖರೀದಿಸಿ ವಾಟ್ಸಾಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ವಾಟ್ಸಪ್ ಚಾಟ್ ಸಿಗದಂತೆ ಮಾಡಿದ್ದಾರೆ.
ಜಿಎಸ್ಟಿ ದರ ಕಡಿತ ಸಾಧ್ಯತೆ
ನವದೆಹಲಿ, ಸೆ. 4: ವಾಹನಗಳ ಮೇಲಿನ ಜಿಎಸ್ಟಿ ದರ ಕಡಿತ ಮಾಡುವ ಸಾಧ್ಯತೆಯ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಸುಳಿವು ನೀಡಿದ್ದು, ವಾಹನ ಉದ್ಯಮಕ್ಕೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ. ಆಟೋ ಸ್ಕ್ರ್ಯಾಪೇಜ್ ನೀತಿ ಸಿದ್ಧವಾಗಿದೆ ಮತ್ತು ಈ ಸಂಬಂಧ ಎಲ್ಲಾ ಪಾಲುದಾರರು ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಜಾವಡೇಕರ್ ತಿಳಿಸಿದ್ದಾರೆ. ವಾಹನಗಳ ಮೇಲಿನ ಜಿಎಸ್ಟಿ ದರ ಕಡಿತದ ಸಾಧ್ಯತೆಗಳ ಬಗ್ಗೆ ವಿವರಿಸಿದ ಅವರು, ದರ ಕಡಿತ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯವು ರೂಪಿಸುತ್ತಿದೆ ಮತ್ತು ನಾನು ಈಗಲೇ ಎಲ್ಲಾ ವಿವರ ನೀಡಲು ಸಾಧ್ಯವಿಲ್ಲ ಎಂದರು.