ಸಿದ್ದಾಪುರ, ಸೆ. 2: ಸಿದ್ದಾಪುರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸ ಲಾಯಿತು. ಸಿದ್ದಾಪುರ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೆ.ಆರ್. ರಾಜನ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಸಭಾ ಕಾರ್ಯಕ್ರಮವನ್ನು ಕಂಬಿಬಾಣೆಯ ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತ, ಮಾರ್ಗದರ್ಶನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ನಾರಾಯಣ ಗುರುಗಳ ಜಯಂತಿಯನ್ನು ಕೇವಲ ಒಂದು ದಿನಕ್ಕೆ ಆಚರಣೆ ಮಾಡದೆ ಅದನ್ನು ಪ್ರತಿ ಶಾಖೆಗಳಲ್ಲಿ ಒಂದು ತಿಂಗಳವರೆಗೂ (ಮೊದಲ ಪುಟದಿಂದ) ಆಚರಿಸುವಂತಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಎಸ್.ಎನ್.ಡಿ.ಪಿ ಯೂನಿಯನ್‍ನ ಮಾಜಿ ಉಪಾಧ್ಯಕ್ಷ ರಾಜೇಂದ್ರ ಬಾಬು ಮಾತನಾಡಿ ಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ಚಿಂತನೆಗಳನ್ನು ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ ಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಸಂಘಟನೆಯಿಂದ ಶಕ್ತರಾಗಿ ಹಾಗೂ ವಿದ್ಯೆಯಿಂದ ಪ್ರಭುತ್ವರಾಗಿ ಎಂಬ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿ ಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಎನ್.ಡಿ.ಪಿ ಸಂಘಟನೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಹಿರಿಯ ಪದಾಧಿಕಾರಿಗಳಾದ ಪಿ.ಕೆ. ಶ್ರೀಧರನ್, ಪಿ.ಎನ್ ಸಹದೇವನ್, ಕೆ.ಎ ಕುಟ್ಟಪ್ಪನ್, ಪಿ.ಎನ್ ವಿಜಯಕುಮಾರ್, ಎನ್. ಗೋಪಾಲನ್, ಎ.ಕೆ ಸತ್ಯನಾರಾಯಣ ಇವರುಗಳನ್ನು ಯೂನಿಯನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸಂಘದ ಸದಸ್ಯರುಗಳ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಕಿರುಕಾಣಿಕೆ ನೀಡಲಾಯಿತು.

ಇದೇ ಸಂದರ್ಭ ಲೇಖಕಿ ಕಾನತ್ತಿಲ್ ರಾಣಿ ಅರುಣ್ ಅವರು ಬರೆದಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಸ್.ಎನ್.ಡಿ.ಪಿ ಯೂನಿಯನ್ ಕಾರ್ಯದರ್ಶಿ ಎಂ.ಪಿ ಶಿವಪ್ರಸಾದ್, ಉಪಾಧ್ಯಕ್ಷ ಆರ್. ರಾಜನ್, ಹಾಗೂ ಕೌನ್ಸಿಲರ್ ಆದ ರಾಜಶೇಖರ್, ಕೆ.ವಿ ಪ್ರೇಮಾನಂದ, ಪಂಚಾಯಿತಿ ಸದಸ್ಯರುಗಳಾದ ಸಿ.ವಿ ನಾರಾಯಣ, ಪಿ. ದಾಮೋದರ, ಪಿ.ಸಿ ನಾರಾಯಣ, ಇತರರು ಹಾಜರಿದ್ದರು. ಓ.ಸಿ ಅಶೋಕ್ ಗುರು ಸ್ಮರಣೆ ಮಾಡಿದರು. ಎಂ.ಪಿ ಶಿವಪ್ರಸಾದ್ ಸ್ವಾಗತಿಸಿ, ಉಪನ್ಯಾಸಕಿ ಸುನಿತಾ ಗಿರೀಶ್ ನಿರೂಪಿಸಿ, ಆರ್. ರಾಜನ್ ವಂದಿಸಿದರು. ನಿಧನ ಹೊಂದಿದ ಉಪ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಸೈನಿಕರುಗಳಿಗೆ, ಕೊರೊನಾ ವೈರಸ್‍ನಿಂದ ಮೃತಪಟ್ಟವರಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.