ಕುಶಾಲನಗರ, ಸೆ. 2: ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ಸಂತ್ರಸ್ತರಿಗೆ ಕಲ್ಪಿಸುವ ನೆರವು ಸರಕಾರದ ಮೂಲಕ ಸಮರ್ಪಕವಾಗಿ ಬಳಕೆಯಾಗದಿರುವ ಬಗ್ಗೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ವಿಷಾದ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬಡ ಸದಸ್ಯರ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿ ಮತ್ತಿತರ ವಸ್ತುಗಳ ಸಾಂಕೇತಿಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಬ್ಯಾಂಕ್ ಮೂಲಕ ಸಂಘದ ಸಂತ್ರಸ್ತ ಸದಸ್ಯ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಚಿಂತನೆ ಹೊಂದಿದ್ದ ಬ್ಯಾಂಕ್ ಪ್ರಸ್ತಾವನೆಗೆ ಸರಕಾರದಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಸೇರಿ ಬ್ಯಾಂಕ್ ಮೂಲಕ 3 ಕೋಟಿ ರೂ. ವೆಚ್ಚದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಕೃಷಿಕರಿಗೆ ಮನೆ ಕಟ್ಟಿಕೊಡುವ ಯೋಜನೆಯನ್ನು ಸಹಕಾರ ಬ್ಯಾಂಕ್ ಹೊಂದಿತ್ತು. ಆದರೆ ಯಾವುದೇ ರೀತಿಯ ಸಹಕಾರ ದೊರಕದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರಲ್ಲದೆ ಈ ಬಾರಿ ಕೊರೊನಾ ಅವಧಿಯಲ್ಲಿ ಎರಡು ವೆಂಟಿಲೇಟರ್‍ಗಳ ಖರೀದಿಗೆ ಸಂಘದ ವತಿಯಿಂದ 6.5 ಲಕ್ಷ ರೂ. ದೇಣಿಗೆ ನೀಡಲಾಗಿತ್ತು. ಆದರೆ ವೆಂಟಿಲೇಟರ್ ಖರೀದಿ ಮಾಡುವಲ್ಲಿ ವಿಳಂಬ ಧೋರಣೆ ಮಾಡುತ್ತಿದ್ದು ಈ ದೇಣಿಗೆ ಕೂಡ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯ 71 ಸಹಕಾರ ಸಂಘಗಳಲ್ಲಿ ಒಂದು ಸಂಘ ಮಾತ್ರ ನಷ್ಟದಲ್ಲಿದ್ದು ಉಳಿದಂತೆ ಎಲ್ಲಾ ಸಂಘಗಳಲ್ಲಿ ಉತ್ತಮ ಆಡಳಿತ ದೊಂದಿಗೆ ಸಂಘ ಲಾಭದಾಯಕವಾಗಿ ಇರುವ ಬಗ್ಗೆ ಮಾಹಿತಿ ನೀಡಿದ ಅವರು, ಕುಶಾಲನಗರ ಸಹಕಾರಿ ಸಂಘ ಉತ್ತಮ ಕಾರ್ಯ ಯೋಜನೆ ನಡೆಸುತ್ತಿದ್ದು ಇತರ ಸಂಘಗಳಿಗೆ ಮಾದರಿಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ 400 ಮಂದಿ ಅಶಕ್ತ ರೈತ

(ಮೊದಲ ಪುಟದಿಂದ) ಕುಟುಂಬಗಳಿಗೆ ಸಹಾಯಹಸ್ತ ನೀಡುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ ಎಂದು ಬಾಂಡ್ ಗಣಪತಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಸಹಕಾರಿ ಕ್ಷೇತ್ರ ಯಾವುದೇ ವರ್ಗ, ವ್ಯಕ್ತಿಗಳಿಗೆ ಸೀಮಿತವಾಗಬಾರದು. ಸಹಾಯಧನ ಬಳಕೆ ಮಾಡುವ ಬಗ್ಗೆ ಬಹುತೇಕರಿಗೆ ಮಾಹಿತಿ ಕೊರತೆ ಇರುವುದಾಗಿ ತಿಳಿಸಿದ ಚಿದ್ವಿಲಾಸ್ ಅವರು, ಕೃಷಿಯಲ್ಲಿ ಹೊಸ ಆವಿಷ್ಕಾರದ ಅವಶ್ಯಕತೆಯಿದೆ. ಮಿಶ್ರತಳಿಗಳಿಗೆ ವಿಫುಲ ಅವಕಾಶವಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಫಲಾನುಭವಿಗಳು ಫಲಶೃತಿ ಸೃಷ್ಠಿಯಾಗುವಂತೆ ಗಮನಹರಿಸುವುದರೊಂದಿಗೆ ತಮ್ಮ ಬದುಕನ್ನು ಹಸನಾಗಿಸಿ ಕೊಳ್ಳ ಬೇಕೆಂದರು. ಕುಶಾಲನಗರ ವ್ಯಾಪ್ತಿಯಲ್ಲಿ ಈ ಎಲ್ಲಾ ಅವಕಾಶ ಇದ್ದು ಇದರ ಸದ್ಬಳಕೆಯಾಗಬೇಕು. ಸಂಘದ ಮೂಲಕ ಕುಟುಂಬಗಳಿಗೆ ಸಹಕಾರ ದೊರೆತಲ್ಲಿ ಪರಸ್ಪರ ಸಹಬಾಳ್ವೆಯೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕೊರೊನಾ ಸಂದರ್ಭದಲ್ಲಿ ಸಂತ್ರಸ್ತರಿಗೆ ಅದರಲ್ಲಿಯೂ ಕೃಷಿಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಕುಶಾಲ ನಗರದ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಸಾಂಕೇತಿಕವಾಗಿ ಲೇಖನ ಸಾಮಗ್ರಿ ಕಿಟ್ ವಿತರಿಸಲಾಯಿತು. ಒಟ್ಟು 275 ಮಕ್ಕಳು 4.5 ಲಕ್ಷ ರೂ. ವೆಚ್ಚದ ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ ಶರವಣಕುಮಾರ್, ಸಹಕಾರ ಸಂಘದ ಲಾಭಾಂಶದಲ್ಲಿ ಈ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಮತ್ತು ಪ್ರೋತ್ಸಾಹಧನ ನೀಡುವುದ ರೊಂದಿಗೆ ಸಂಘದ ಬಡ ಕುಟುಂಬದ ಸದಸ್ಯರುಗಳಿಗೆ ಅಗತ್ಯ ವಸ್ತುಗಳ ನೆರವು ನೀಡಿರುವ ಬಗ್ಗೆ ಮಾಹಿತಿ ಒದಗಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ವಿ.ಎಸ್. ಆನಂದಕುಮಾರ್, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ನಿರ್ದೇಶಕರು ಗಳಾದ ಅಬ್ದುಲ್ ಖಾದರ್, ಪಿ.ಬಿ.ಯತೀಶ್, ಮಧುಸೂದನ್, ರಾಮಕೃಷ್ಣ, ಕವಿತಾ ಮೋಹನ್, ನೇತ್ರಾವತಿ, ಗಣೇಶ್, ಮಧುಕುಮಾರ್ ಸಂಘದ ವ್ಯವಸ್ಥಾಪಕ ಲೋಕೇಶ್, ಸಿಬ್ಬಂದಿಗಳಾದ ವಿಜಯಕುಮಾರ್, ಅಚ್ಯುತ, ಬಬಿತಾ ಇದ್ದರು.