ಸೋಮವಾರಪೇಟೆ, ಸೆ. 2: ಒತ್ತುವರಿಯಾಗಿದ್ದ ಕೆರೆಗಳ ಜಾಗವನ್ನು ತೆರವುಗೊಳಿಸುವ ಸಂಬಂಧವಾಗಿ ತಾಲೂಕು ಕಂದಾಯ ಇಲಾಖೆಯಿಂದ ಕೆರೆಗಳ ಒತ್ತುವರಿ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟಾರೆಯಾಗಿ ಸೋಮವಾರಪೇಟೆ ತಾಲೂಕಿನಲ್ಲಿ 39 ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ವರದಿ ಸಿದ್ಧಗೊಂಡಿದೆ.

ಇದರಲ್ಲಿ 6 ಗ್ರಾಮಗಳಲ್ಲಿದ್ದ ಕೆರೆ ಮಾಯವಾಗಿದ್ದು, ಕೆರೆ ಇದ್ದ ಜಾಗ ಸಂಪೂರ್ಣವಾಗಿ ಒತ್ತುವರಿಯಾಗಿರುವ ಬಗ್ಗೆ ಇಲಾಖೆಗೆ ಮಾಹಿತಿ ಲಭಿಸಿದೆ. ಮಾಯವಾಗಿರುವ ಕೆರೆಯನ್ನು ಹುಡುಕುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ತಾಲೂಕಿನ ಐದು ಹೋಬಳಿಯಲ್ಲಿ 39 ಕೆರೆಗಳು ಒತ್ತುವರಿಯಾಗಿರುವದನ್ನು ಕಂದಾಯ ಇಲಾಖೆ ಗುರುತಿಸಿದ್ದು, ಇದೀಗ ಒತ್ತುವರಿ ಕಾರ್ಯವನ್ನು ಪ್ರಾರಂಭಿಸಿದೆ.

ಚೌಡ್ಲು ಗ್ರಾಮದ ಒತ್ತುವರಿ ಜಾಗವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಂತರ ಜಾಗವನ್ನು ತೆರವುಗೊಳಿಸಿದ್ದಾರೆ. ತಹಶೀಲ್ದಾರ್ ಗೋವಿಂದರಾಜ್, ಚೌಡ್ಲು ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣಕುಮಾರ್, ಕಂದಾಯ ನಿರೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಹೇಮಾವತಿ ಇತರರು ಈ ಸಂದರ್ಭ ಉಪಸ್ಥಿತರಿದ್ದು, ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿದ್ದಾರೆ.

6 ಕೆರೆಗಳು ಮಾಯ: ತಾಲೂಕಿನ ಸಿದ್ದಲಿಂಗಪುರದಲ್ಲಿ 3.46 ಏಕರೆ ಕೆರೆ ಇದ್ದ ಬಗ್ಗೆ ದಾಖಲೆಗಳಿದ್ದು, ಇದೀಗ ಸಂಪೂರ್ಣ ಒತ್ತುವರಿಯಾಗಿ ಕೆರೆಯೇ ಮಾಯವಾಗಿದೆ. ಇದರೊಂದಿಗೆ ದೊಡ್ಡಅಳುವಾರ ಗ್ರಾಮದ ಸ.ನಂ. 11 ರಲ್ಲಿದ್ದ 3.52 ಏಕರೆ ಕೆರೆ ಜಾಗವನ್ನು ಪಶುವೈದ್ಯಕೀಯ ಸಂಶೋಧನಾ ಕೇಂದ್ರ ಇವರು ಒತ್ತುವರಿ ಮಾಡಿಕೊಂಡಿದ್ದಾರೆ.

ಚೌಡ್ಲು ಗ್ರಾಮದ 142 ಸ.ನಂ.ರಲ್ಲಿ 0.18 ಏಕರೆ ಜಾಗ ಪಾರ್ಕ್‍ಗೆಂದು ಒತ್ತುವರಿಯಾಗಿದೆ. ತೋಯಳ್ಳಿ ಗ್ರಾಮದ ಸ.ನಂ.47ರಲ್ಲಿ 1.07 ಏಕರೆ, 7ನೇ ಹೊಸಕೋಟೆಯ ಸ.ನಂ.130ರ 1.02 ಏಕರೆ, ಇದೇ ಪಂಚಾಯಿತಿಯ ಸ.ನಂ.127ರಲ್ಲಿ 0.48 ಏಕರೆ ಸಂಪೂರ್ಣವಾಗಿ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ತಯಾರಿಸಿದ್ದಾರೆ.

ಹೋಬಳಿವಾರು ಒತ್ತುವರಿ: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ಹಾನಗಲ್ಲು ಶೆಟ್ಟಳ್ಳಿ, ಯಡೂರು, ಚೌಡ್ಲು, ತೋಯಳ್ಳಿ, ದೊಡ್ಡಮಳ್ತೆ, ಕ್ಯಾತನಹಳ್ಳಿ, ಮಾಲಂಬಿ, ಆಲೂರು, ದುಂಡಳ್ಳಿ, ಶನಿವಾರಸಂತೆ ಹೋಬಳಿಯ ಹೊಸಳ್ಳಿ ಗ್ರಾಮದ ಮೂರು ಕೆರೆಗಳು, ನಂದಿಗುಂದದ 2 ಕೆರೆಗಳು, ಹಾರೆಹೊಸೂರು ಕೆರೆ, ಸುಂಟಿಕೊಪ್ಪ ಹೋಬಳಿಯ 7ನೇ ಹೊಸಕೋಟೆಯಲ್ಲಿ 7 ಕೆರೆಗಳು ಒತ್ತುವರಿಯಾಗಿವೆ.

ಕೊಡ್ಲಿಪೇಟೆ ಹೋಬಳಿಯ ಹೆಬ್ಬುಲುಸೆ, ಕ್ಯಾತನಹಳ್ಳಿಯಲ್ಲಿ ತಲಾ ಒಂದು ಹಾಗೂ ರಾಮೇನಹಳ್ಳಿಯಲ್ಲಿ ಎರಡು ಕೆರೆಗಳು ಒತ್ತುವರಿಯಾಗಿವೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಚಿಕ್ಕತ್ತೂರು, ಸಿದ್ದಲಿಂಗಪುರ-3, ಚಿಕ್ಕನಾಯಕನಹೊಸಳ್ಳಿ-2, ಮರೂರು, 6ನೇ ಹೊಸಕೋಟೆ, ಮಾದಾಪಟ್ಟಣ, ಹೊಸಪಟ್ಟಣ, ಮಣಜೂರು, ಕಾಸಲಗೋಡು, ದೊಡ್ಡಅಳುವಾರ ಗ್ರಾಮಗಳಲ್ಲಿ ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು, ಸರ್ವೆ ನಂತರ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಮುಂದಾಗಿದೆ.