ಕಣಿವೆ, ಸೆ. 2: ಕುಶಾಲನಗರ ಪಟ್ಟಣದಿಂದ ದಿನಂಪ್ರತೀ ಸಂಗ್ರಹವಾಗುವ ಕಸ ತ್ಯಾಜ್ಯಗಳನ್ನು ಭುವನಗಿರಿ ಗ್ರಾಮದ ಬಳಿ ಇರುವ ಪಂಚಾಯಿತಿ ಜಾಗದಲ್ಲಿ ಮನಬಂದಂತೆ ಸುರಿದು ಸರಿಯಾಗಿ ನಿರ್ವಹಣೆ ಮಾಡುವುದನ್ನು ಮರೆತ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಜೆಸಿಬಿ, ಹಿಟಾಚಿ ಯಂತ್ರಗಐ ಮೂಲಕ ಎರಡು ದಿನಗಳ ಕಾಲ ಸತತವಾಗಿ ಕಸದ ರಾಶಿಯ ಮೇಲೆ ಮಣ್ಣು ಸುರಿದು ಕಸದ ವಾಸನೆ ಹರಡದಂತೆ ಎಚ್ಚರ ವಹಿಸಿದರು.

ಅಲ್ಲದೇ ಕೊಳೆತು ನಾರುವ ಕಸದ ಸಮಸ್ಯೆಯಿಂದ ಸೃಷ್ಟಿಯಾಗುವ ನೊಣಗಳು ಉಂಟು ಮಾಡುತ್ತಿದ್ದ ಉಪಟಳದ ಬಗ್ಗೆಯೂ ಬರೆದಿದ್ದರಿಂದ ಕಸದ ರಾಶಿಯ ಸನಿಹದಲ್ಲಿ ವಾಸವಿರುವ ಕೃಷಿಕ ಸುರೇಶ್ ಎಂಬವರ ಮನೆಗೆ ಸ್ಯಾನಿಟೈಸ್ ಮಾಡುವ ಮೂಲಕ ನೊಣ ಹಾಗೂ ಸೊಳ್ಳೆಗಳ ಉಪಟಳವನ್ನು ನಿಗ್ರಹಿಸಲಾಯಿತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಕೊರೊನಾದಿಂದಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆ ವಿಳಂಬವಾಗಿತ್ತು. ಇದೀಗ ಪಂಚಾಯಿತಿಯ ಆರೋಗ್ಯಾಧಿಕಾರಿ ಉದಯಕುಮಾರ್ ಹಾಗೂ ಅಭಿಯಂತರರೊಂದಿಗೆ ಸ್ಥಳ ಪರಿಶೀಲಿಸಿ ವೈಜ್ಞಾನಿಕವಾಗಿ ಕಸ ಹಾಗೂ ತ್ಯಾಜ್ಯಗಳನ್ನು ಆಳವಾಗಿ ತೆರೆದ ಗುಂಡಿಯೊಳಗೆ ರಾಸಾಯನಿಕಗಳೊಂದಿಗೆ ಮಣ್ಣಿನಿಂದ ಮುಚ್ಚಲಾಗಿದೆ. ಹಾಗೆಯೇ ನೊಣಗಳನ್ನು ನಿಯಂತ್ರಿಸಲು ಕೂಡ ಅಗತ್ಯವಾದ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಸದ ನಿರ್ವಹಣೆ ಸಂದರ್ಭ ಪಂಚಾಯತಿ ಪೌರ ಕಾರ್ಮಿಕರಾದ ಬಣ್ಣಾರಿ ಹಾಗೂ ಬಾಬು ಇದ್ದರು. -ಮೂರ್ತಿ