ಗೋಣಿಕೊಪ್ಪ ವರದಿ, ಸೆ. 1 : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಕಲ್ಲಳ್ಳ ವನ್ಯಜೀವಿ ವಲಯ ಅಧಿಕಾರಿಗಳು ವಶಪಡಿಸಿ ಕೊಂಡಿದ್ದು, ಆರೋಪಿಯಿಂದ ಹುಲಿಯ ಎರಡು ಕೋರೆ ಹಲ್ಲು, ನಾಲ್ಕು ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಟ್ಟೂರು ಗ್ರಾಮದ ಹೊಟ್ಟೆಂಗಡ ರಂಜು ಅಲಿಯಾಸ್ ಬಿದ್ದಪ್ಪ (35) ಬಂಧಿತ ಆರೋಪಿ.ಕಳೆದ ಆಗಸ್ಟ್ 30 ರಂದು ಬೆಂಗಳೂರು ರಾಮನಗರದ ಪೆಟ್ರೋಲ್ ಬಂಕ್ ಸಮೀಪ ವಶಪಡಿಸಿ ಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಹುಲಿಯ ಅಂಗಾಂಗಗಳನ್ನು ಮನೆ ಸಮೀಪದ ಕಾಫಿ ತೋಟದಲ್ಲಿ ಅಡಗಿಸಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇದರಂತೆ

(ಮೊದಲ ಪುಟದಿಂದ) ಇಂದು ಅಂಗಾಂಗಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಗಸ್ಟ್ 26 ರಂದು ಹುಲಿಯ ಕಳೇಬರ ನಾಗರಹೊಳೆ ಉದ್ಯಾನವನ ಸಮೀಪ ಪತ್ತೆಯಾಗಿತ್ತು. ಹುಲಿಯ ಕಾಲು ಕತ್ತರಿಸಲಾಗಿತ್ತು. ತಲೆ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಡಿಸಿಎಫ್ ಮಹೇಶ್‍ಕುಮಾರ್, ಎಸಿಎಫ್ ಪೌಲ್‍ಆಂಥೋನಿ, ಆರ್‍ಎಫ್‍ಒ ಗಿರೀಶ್ ಜಿ ಚೌಗುಲೆ, ಡಿಆರ್‍ಎಫ್‍ಒ ಎಂ. ಸಿ. ಯೋಗೇಶ್, ಅರಣ್ಯ ರಕ್ಷಕರಾದ ಭರಮಪ್ಪ, ಗಣೇಶ, ಚಾಲಕ ನಿರಾಲ್‍ಕುಮಾರ್, ಬಸವರಾಜು ಇದ್ದರು.