ಶನಿವಾರಸಂತೆ, ಸೆ. 1: ಸಮೀಪದ ಕೊಡ್ಲಿಪೇಟೆ ಹೋಬಳಿಯಾದ್ಯಂತ ವಿದ್ಯುತ್ ಸಮಸ್ಯೆ ಗಂಭೀರವಾಗಿದ್ದು, ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೈಗಾರಿಕೆ ನಡೆಸುವವರ ರೈತರ ಸಮಸ್ಯೆ ಒಂದೆಡೆಯಾದರೇ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆದಾರರು ನೆಟ್ ಸಮಸ್ಯೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊಡ್ಲಿಪೇಟೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸೆಸ್ಕ್ ಉಪ ಶಾಖೆಯಿಂದ ಹೋಬಳಿ ವ್ಯಾಪ್ತಿಯಲ್ಲಿ 6 ಸಾವಿರಕ್ಕೂ ಅಧಿಕ ಬಳಕೆದಾರಿದ್ದಾರೆ. ಇಲ್ಲಿಗೆ ಹಲವಾರು ವರ್ಷಗಳಿಂದ ಶನಿವಾರಸಂತೆ ವಿದ್ಯುತ್ ವಿತರಣಾ ಘಟಕದಿಂದ 11 ಕೆ.ವಿ. ವಿದ್ಯುತ್ ಲೈನ್ ಮೂಲಕ ಸಂಪರ್ಕ ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳು ದ್ವಿಗುಣಗೊಂಡವು. ಸ್ಪಂದಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊಡ್ಲಿಪೇಟೆಯಲ್ಲೇ 66/11 ಕೆ.ವಿ. ವಿದ್ಯುತ್ ವಿತರಣಾ ಘಟಕ ನಿರ್ಮಿಸಲು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮೇಲಧಿಕಾರಿಗಳ ಅನುಮತಿ ದೊರೆತ ಹಿನ್ನೆಲೆ ವಿದ್ಯುತ್ ಉಪಕೇಂದ್ರದ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳ ಸಹಕಾರದಿಂದ ಘಟಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪುಗೊಂಡಿತು. ಡಿ.ಪಿ.ಆರ್. ತಯಾರಿಸಲಾಯಿತು. ಆದರೆ ಸೂಕ್ತ ಜಾಗದ ವ್ಯವಸ್ಥೆಯಾಗದೆ ಹಾಗೂ ಕಂದಾಯ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯಿತಿ ಸಹಕಾರವಿಲ್ಲದೆ ಯೋಜನೆ ನೆನೆಗುದಿಗೆ ಬಿದ್ದಿದೆ.
6 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋರೆ-ಹೊಸಳ್ಳಿ ಸರ್ವೆ ನಂ. 24/1 ರಲ್ಲಿ 1 ಎಕರೆ ಜಾಗದಲ್ಲಿ ಘಟಕ ನಿರ್ಮಸಲು ಸೆಸ್ಕ್ ಅಧಿಕಾರಿ ಸ್ಥಳ ಗುರುತಿಸಿದರು. ಜಾಗ ಮಂಜೂರಾತಿಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರು. ಈ ಸಂದರ್ಭ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ವರದಿಯೊಂದಿಗೆ ಜಾಗದ ಕಡತ, ದಾಖಲಾತಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲಾಧಿಕಾರಿ ಜಾಗ ಮಂಜೂರು ಮಾಡುವ ಸಂದರ್ಭ ಗ್ರಾಮದ ಕೆಲವರು ಮಂಜೂರು ಮಾಡದಂತೆ ಆಕ್ಷೇಪ ತಡೆ ಅರ್ಜಿ ಸಲ್ಲಿಸಿದರು. ಜಿಲ್ಲಾಧಿಕಾರಿ ಸೆಸ್ಕ್‍ನ ಜಾಗ ಮಂಜೂರಾತಿ ಅರ್ಜಿಯನ್ನು ತಿರಸ್ಕರಿಸಿದರು.
ಕೊಡ್ಲಿಪೇಟೆ ಶಾಖಾ ಕಚೇರಿ ಇಂಜಿನಿಯರ್ ವಿವಿಧ ಕಡೆಗಳಲ್ಲಿ ಸೂಕ್ತ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು, ಅಧಿಕಾರಿಗಳ ಸಂಪೂರ್ಣ ಸಹಕಾರವಿಲ್ಲದೇ ವಿದ್ಯುತ್ ಘಟಕ ನಿರ್ಮಾಣ ಯೋಜನೆ ಸಾಕಾರಗೊಳ್ಳುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊಡ್ಲಿಪೇಟೆಯಲ್ಲಿ 66/11 ಕೆ.ವಿ. ವಿತರಣಾ ಕೇಂದ್ರ ನಿರ್ಮಾಣವಾದರೆ ರೈತರಿಗೆ, ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುತ್ತದೆ. ಮೇಲಧಿಕಾರಿಗಳಿಂದ ಘಟಕ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಆದರೆ ಜಾಗ ಮಂಜೂರಾತಿ ವಿಷಯದಲ್ಲಿ ತಡೆಯಾಗುತ್ತಿದೆ ಎಂದು ಕೊಡ್ಲಿಪೇಟೆ ಸೆಸ್ಕ್ ಶಾಖೆ ಇಂಜಿನಿಯರ್ ಮನುಕುಮಾರ್ ಹೇಳುತ್ತಾರೆ.
ವಿದ್ಯುತ್ ಇಲಾಖೆ ಅಧಿಕಾರಿಗಳ ಸಹಕಾರದಿಂದ ಕೊಡ್ಲಿಪೇಟೆಯಲ್ಲಿ ವಿದ್ಯುತ್ ಘಟಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪುಗೊಂಡಿದೆ. ಆದರೆ ಜಾಗ ಮಂಜೂರಾತಿ ವಿಚಾರದಲ್ಲಿ ಸಮಸ್ಯೆಯಾಗಿದು, ಘಟಕ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂಬುದು ನಾಗರಿಕ ವೇದಕುಮಾರ್ ಹೇಳಿಕೆಯಾಗಿದೆ.