ಮಡಿಕೇರಿ, ಸೆ. 1: ತನ್ನದೆ ಆದ ವಿಶಿಷ್ಟ ಸಂಸ್ಕøತಿ, ಪರಂಪರೆ ಹೊಂದಿರುವ ಕೊಡವ ಜನಾಂಗಕ್ಕೆ ಸಿಗಬೇಕಾದ ಅಮೂಲಾಗ್ರ ಮಾನ್ಯತೆಯನ್ನು ಪಡೆದುಕೊಂಡು ಕೊಡವ ಜನಾಂಗವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುದೀರ್ಘ ಹೋರಾಟದ ಅಗತ್ಯವಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಸಿಎನ್‍ಸಿ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ನಾಡ್ ಮಂದ್‍ನಲ್ಲಿ ನಡೆದ 26ನೇ ವರ್ಷದ ಕೈಲ್ ಮುಹೂರ್ತ ಆಚರಣೆಯಲ್ಲಿ ಅವರು ಮಾತನಾಡಿದರು. ಕೊಡವ ಲ್ಯಾಂಡ್ ಸೇರಿದಂತೆ ಕೊಡವ ಜನಾಂಗಕ್ಕೆ ಸಿಗಬೇಕಾದ ಹಕ್ಕುಗಳಿಗಾಗಿ ಸಿಎನ್‍ಸಿ ಹಲವಾರು ವರ್ಷಗಳಿಂದ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದೆ. ಕೊಡವ ಭಾಷೆ, ಜನಾಂಗ ಸರಕಾರಗಳ ಮಟ್ಟದಲ್ಲಿ ಪರಿಗಣಿಸಲ್ಪಟ್ಟು ನಮ್ಮ ಬೇಡಿಕೆಗಳು ಈಡೇರಬೇಕಾದರೆ ನಾವು ನಿರಂತರವಾಗಿ ಹೋರಾಟ ಮಾಡಲೇಬೇಕಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಯಾವುದೇ ಭಿಕ್ಷೆ ಬೇಡುತ್ತಿಲ್ಲ; ಕೊಡವರ ಅರ್ಹತೆಗೆ ತಕ್ಕಂತೆ ಸಿಗಬೇಕಾದ ಸ್ಥಾನಮಾನವನ್ನು ಕಲ್ಪಿಸುವಂತೆ ಆಗ್ರಹಿಸುತ್ತಿದೆ. ಈ ನಿಟ್ಟಿನಲ್ಲಿ ಸಿಎನ್‍ಸಿ ಹೋರಾಟವನ್ನು ಮುಂದುವರೆಸುತ್ತಾ ಬಂದಿದೆ ಎಂದ ಅವರು, ಕೊಡವರು ಇತರ ಜನಾಂಗಗಳನ್ನು ಗೌರವಿಸುವುದ ರೊಂದಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಿಸೆಯಲ್ಲಿ ಸಿಎನ್‍ಸಿ ಹೋರಾಟಕ್ಕೆ ಕೈಜೋಡಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಕೊಡವ ಲ್ಯಾಂಡ್ ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತೆ ಹಾಗೂ ಕೊಡವ ಆದಿ ಸಂಜಾತ ಬುಡಕಟ್ಟು ಸ್ಥಾನಮಾನದ ಹಕ್ಕು ಪ್ರತಿಪಾದನೆಯ ನಿರ್ಣಯವನ್ನು ಅಂಗೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ತೋಕ್‍ಪೂನಿಂದ ಅಲಂಕರಿಸಿದ ಬಂದೂಕುಗಳಿಗೆ ಕೊಡವರ ಪ್ರಮುಖ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು. ‘ಮೀದಿ’ ಇಟ್ಟು ಗುರುಕಾರೋಣರಿಗೆ, ಭೂಮಿ, ಮಾತೆ ಕಾವೇರಿಗೆ, ಸೂರ್ಯ, ಚಂದ್ರರಿಗೆ ನಮನ ಸಲ್ಲಿಸಲಾಯಿತು.
ಈ ಹಿಂದೆ ಸಿಎನ್‍ಸಿಯ ಮನವಿ ಆಲಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ದೇವಟ್ಟ್ ಪರಂಬ್‍ನಲ್ಲಿ ಮರಣ ಹೊಂದಿದವರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಸಂಪ್ರದಾಯದಂತೆ ಗಾಳಿಯಲ್ಲಿ ಗುಂಡು ಹಾರಿಸಿ ಬಾಳೆ ಕಡಿಯಲಾಯಿತು. ಕಾರೋಣ ಗೀತೆಯನ್ನು ನಿಷಾ ಹಾಡಿದರು. ಕಲಿಯಂಡ ಪ್ರಕಾಶ್ ಸ್ವಾಗತಿಸಿದರು.
ಈ ಸಂದರ್ಭ ಪುಲ್ಲೇರ ಕಾಳಪ್ಪ, ನಂದಿನೆರವಂಡ ಪಾರ್ವತಿ, ಪುಲ್ಲೇರ ಸ್ವಾತಿ, ಬೊಟ್ಟಂಗಡ ಗಿರೀಶ್, ನಂದಿನೆರವಂಡ ವಿಜು, ಮನು ಮುತ್ತಪ್ಪ, ಮಣವಟ್ಟಿರ ಜಗು, ಚಂಬಂಡ ಜನತ್, ಪಟ್ಟಮಾಡ ಲಲಿತಾ ಮತ್ತಿತರರು ಇದ್ದರು.
ಬಳಿಕ ಕ್ಯಾಪಿಟಲ್ ವಿಲೇಜ್‍ಗೆ ತೆರಳಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ದುಡಿಕೊಟ್ಟ್ ಪಾಟ್, ಪರೆಯಕಳಿ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.